ADVERTISEMENT

ಬೆಂಗಳೂರು ನಗರದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣ ಹೆಚ್ಚಳ: ಡಾ.ಸಿ.ರಾಮಚಂದ್ರ

ಪ್ರತಿ ವರ್ಷ ಸರಾಸರಿ 1,688 ಹೊಸ ಪ್ರಕರಣಗಳು ಪತ್ತೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 5:07 IST
Last Updated 12 ಅಕ್ಟೋಬರ್ 2022, 5:07 IST
ಡಾ.ಸಿ.ರಾಮಚಂದ್ರ
ಡಾ.ಸಿ.ರಾಮಚಂದ್ರ   

ಬೆಂಗಳೂರು: ‘ಬದಲಾದ ಜೀವನ ಶೈಲಿ, ಪಾಶ್ಚಿಮಾತ್ಯ ಆಹಾರ ಪದ್ಧತಿ, ಧೂಮಪಾನದಂತಹ ವ್ಯಸನದಿಂದ ನಗರದಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಪ್ರತಿ ವರ್ಷ ಸರಾಸರಿ 1,688 ಹೊಸ ಪ್ರಕರಣಗಳು ಪತ್ತೆಯಾಗುತ್ತಿವೆ’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ಕಳವಳ ವ್ಯಕ್ತ‍ಪಡಿಸಿದೆ.

ಸಂಸ್ಥೆಯು ಸ್ತನ ಕ್ಯಾನ್ಸರ್ ಮಾಸಾಚರಣೆಯ ಪ್ರಯುಕ್ತ ಈ ತಿಂಗಳು ವಿವಿಧೆಡೆ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡಿದೆ. ಈ ಶಿಬಿರಗಳಲ್ಲಿ ರೋಗ ಪತ್ತೆ ಮಾಡಿ, ಚಿಕಿತ್ಸೆ ಒದಗಿಸಲಾಗುತ್ತಿದೆ.

‘ನಗರದಲ್ಲಿ ಸದ್ಯ ಸುಮಾರು 4,558 ಸ್ತನ ಕ್ಯಾನ್ಸರ್ ಪ್ರಕರಣಗಳಿವೆ. ಮಹಿಳೆಯರಲ್ಲಿ ಕಾಣಿಸಿಕೊಳ್ಳುತ್ತಿರುವ ಒಟ್ಟಾರೆ ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 28 ರಷ್ಟು ಸ್ತನ ಕ್ಯಾನ್ಸರ್ ಪ್ರಕರಣಗಳಾಗಿವೆ. ಸಂಸ್ಥೆಯಲ್ಲಿ ಪ್ರತಿವರ್ಷ ಸುಮಾರು 800 ಸ್ತನ ಕ್ಯಾನ್ಸರ್ ಪ್ರಕರಣಗಳು ಹೊಸದಾಗಿ ವರದಿಯಾಗುತ್ತಿವೆ. ಈ ಕಾಯಿಲೆಯನ್ನು ಬೇಗ ಪತ್ತೆ ಮಾಡಿ, ಚಿಕಿತ್ಸೆ ಒದಗಿಸಿದಲ್ಲಿ ರೋಗ ಗುಣಪಡಿಸಲು ಸಾಧ್ಯ. ಆದರೆ, ಸ್ತನ ಕ್ಯಾನ್ಸರ್ ಪೀಡಿತರಲ್ಲಿ ಶೇ 50ಕ್ಕಿಂತ ಅಧಿಕ ರೋಗಿಗಳು 3ನೇ ಅಥವಾ 4ನೇ ಹಂತದಲ್ಲಿ ದಾಖಲಾಗುತ್ತಿದ್ದಾರೆ’ ಎಂದು ಸಂಸ್ಥೆಯ ನಿ‌ರ್ದೇಶಕ ಡಾ.ಸಿ. ರಾಮಚಂದ್ರ ತಿಳಿಸಿದ್ದಾರೆ.

ADVERTISEMENT

ದ್ವಿತೀಯ ಸ್ಥಾನ: ‘ದೇಶದಲ್ಲಿ ಪ್ರತಿ ವರ್ಷ ಸುಮಾರು 1,78,000 ಸ್ತನ ಕ್ಯಾನ್ಸರ್ ಪ್ರಕರಣಗಳು ಪತ್ತೆಯಾಗುತ್ತಿವೆ. ರಾಜ್ಯದಲ್ಲಿ 9,800ಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ಸದ್ಯ 30 ಸಾವಿರ ಸ್ತನ ಕ್ಯಾನ್ಸರ್ ಪ್ರಕರಣಗಳಿವೆ ಎಂದು ಅಂದಾಜಿಸಲಾಗಿದೆ. ದೇಶದಲ್ಲಿ ಅತೀ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿರುವ ಮಹಾನಗರಗಳಲ್ಲಿ ಬೆಂಗಳೂರು ದ್ವಿತೀಯ ಸ್ಥಾನದಲ್ಲಿದೆ. ಚೆನ್ನೈನಲ್ಲಿ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ’ ಎಂದು ಹೇಳಿದ್ದಾರೆ.

‘ಆರಂಭಿಕ ಹಂತದಲ್ಲಿ ಕಾಯಿಲೆ ಪತ್ತೆಯಾದರೆ ಗುಣಪಡಿಸುವ ಸಾಧ್ಯತೆ ಶೇ 90 ರಷ್ಟು ಇರುತ್ತದೆ. ಪಾಶ್ಚಿಮಾತ್ಯ ದೇಶಗಳಿಗೆ ಹೋಲಿಸಿದರೆ ದೇಶದಲ್ಲಿ ಸ್ತನ ಕ್ಯಾನ್ಸರ್‌ನಿಂದ ಬದುಕುಳಿಯುವಿಕೆಯ ಪ್ರಮಾಣ ಕಡಿಮೆ ಇದೆ. ಅಮೆರಿಕದಲ್ಲಿ ಶೇ 89ರಷ್ಟು ಮತ್ತು ಇಂಗ್ಲೆಂಡ್‌ನಲ್ಲಿ ಶೇ 82ರಷ್ಟು ‌ಬದುಕುಳಿಯುವ ಸಾಧ್ಯತೆಯಿದೆ. ಈ ಪ್ರಮಾಣ ದೇಶದಲ್ಲಿ ಶೇ 65 ರಿಂದ ಶೇ 70 ರಷ್ಟಿದೆ’ ಎಂದು ತಿಳಿಸಿದ್ದಾರೆ.

ಸ್ತನ ಕ್ಯಾನ್ಸರ್ ಲಕ್ಷಣಗಳು

*ಸ್ತನದಲ್ಲಿ ಊತ

*ಸ್ತನ ಅಥವಾ ತೊಟ್ಟುಗಳಲ್ಲಿ ನೋವು

*ತೊಟ್ಟು ಒಳಕ್ಕೆ ಹೋಗುವುದು

*ತೊಟ್ಟುಗಳಿಂದ ಹಳದಿ ಅಥವಾ ಹಸಿರು ಮಿಶ್ರಿತ ದ್ರವರೂಪ ಸ್ರವಿಸುವುದು

*ಸ್ತನ ಚರ್ಮ ಅಥವಾ ತೊಟ್ಟುಗಳು ಕೆಂಪಾಗುವುದು

*ಚರ್ಮದಲ್ಲಿ ಅಸಹಜತೆ ಅಥವಾ ಮಬ್ಬಾಗಿಸುವಿಕೆ

*ತೊಟ್ಟುಗಳ ಬಳಿ ಅಥವಾ ಸ್ತನ ಪ್ರದೇಶದಲ್ಲಿ ಗಡ್ಡೆ ಕಾಣಿಸಿಕೊಳ್ಳುವುದು

*ಕಂಕುಳಲ್ಲಿ ಗಡ್ಡೆ

*ಸ್ತನದ ಆಕಾರದಲ್ಲಿ ಬದಲಾವಣೆ

*ತೊಟ್ಟುಗಳಿಂದ ರಕ್ತದ ಹನಿ ಒಸರುವುದು

*ಮೂಳೆ ನೋವು

ಸ್ತನ ಕ್ಯಾನ್ಸರ್ ತಡೆಗಟ್ಟುವಿಕೆ

*ಧೂಮಪಾನ ವ್ಯಸನ ಬಿಡಬೇಕು

*ಮದ್ಯಸೇವನೆ ನಿಯಂತ್ರಣದಲ್ಲಿ ಇರಬೇಕು

*ವ್ಯಾಯಾಮ ಮಾಡಬೇಕು

*ನಿಯಮಿತ ಪರೀಕ್ಷೆಗೆ ಒಳಗಾಗಬೇಕು

*
ರೋಗ ಉಲ್ಬಣಗೊಂಡ ಬಳಿಕ ಚಿಕಿತ್ಸೆಗೆ ಬರುತ್ತಾರೆ. ಪ್ರಾರಂಭಿಕ ಹಂತದಲ್ಲೇ ಸ್ತನ ಕ್ಯಾನ್ಸರ್ ಇರುವುದನ್ನು ಪತ್ತೆ ಮಾಡಿ, ಚಿಕಿತ್ಸೆ ಒದಗಿಸಿದಲ್ಲಿ ಕಾಯಿಲೆ ಗುಣಪಡಿಸಲು ಸಾಧ್ಯ
-ಡಾ.ಸಿ. ರಾಮಚಂದ್ರ, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.