ADVERTISEMENT

ಲಂಚ ಪ್ರಕರಣ: ಬಿಬಿಎಂಪಿ ಆರೋಗ್ಯಾಧಿಕಾರಿ ಬಂಧನ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 16:34 IST
Last Updated 16 ಆಗಸ್ಟ್ 2021, 16:34 IST

ಬೆಂಗಳೂರು: ಶೌಚಾಲಯ ಮತ್ತು ಮೂತ್ರಾಲಯಗಳ ಸ್ವಚ್ಛತಾ ಕಾಮಗಾರಿ ನಿರ್ವಹಿಸಿದ್ದ ಗುತ್ತಿಗೆದಾರರಿಗೆ ಬಾಕಿ ಬಿಲ್‌ ಪಾವತಿಗೆ ಅನುಮೋದನೆ ನೀಡಲು ₹ 15,000 ಲಂಚ ಪಡೆಯುತ್ತಿದ್ದ ಬಿಬಿಎಂಪಿ ವಾರ್ಡ್‌ ಸಂಖ್ಯೆ 120–ಸಿ ಕಿರಿಯ ಆರೋಗ್ಯಾಧಿಕಾರಿ ಕೃಷ್ಣ ಎಂಬುವವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದೆ.

ಗುತ್ತಿಗೆದಾರರೊಬ್ಬರು ವಾರ್ಡ್‌ 120–ಸಿ ವ್ಯಾಪ್ತಿಯಲ್ಲಿನ ಸಾರ್ವಜನಿಕ ಶೌಚಾಲಯ ಮತ್ತು ಮೂತ್ರಾಲಯಗಳ ಸ್ವಚ್ಛತಾ ಕೆಲಸ ನಿರ್ವಹಿಸಿದ್ದರು. ಆರು ತಿಂಗಳಿನಿಂದ ಬಿಲ್‌ ಪಾವತಿ ಮಾಡಿರಲಿಲ್ಲ. ಬಿಲ್‌ ಪಾವತಿಸುವಂತೆ ಅವರು ಬಿಬಿಎಂಪಿಗೆ ಅರ್ಜಿ ಸಲ್ಲಿಸಿದ್ದರು. ಕಡತವು ಕಿರಿಯ ಆರೋಗ್ಯಾಧಿಕಾರಿ ಬಳಿ ಬಾಕಿ ಇತ್ತು. ಅವರನ್ನು ಭೇಟಿಮಾಡಿದಾಗ, ₹ 50,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಇಬ್ಬರ ನಡುವೆ ಈ ಕುರಿತು ಮಾತುಕತೆ ನಡೆದಿತ್ತು. ₹ 50,000 ನೀಡಿದರೆ ಬಿಲ್‌ ಪಾವತಿಗೆ ಶಿಫಾರಸು ಮಾಡುವುದಾಗಿ ತಿಳಿಸಿದ್ದ ಆರೋಪಿ ಅಧಿಕಾರಿ, ₹ 15,000 ಮುಂಗಡ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಗುತ್ತಿಗೆದಾರ ಭ್ರಷ್ಟಾಚಾರ ನಿಗ್ರಹ ದಳದ ಬೆಂಗಳೂರು ನಗರ ಘಟಕದ ಕಚೇರಿಗೆ ದೂರು ನೀಡಿದ್ದರು.

ADVERTISEMENT

ಕಾಟನ್‌ಪೇಟೆಯ ತುಳಸಿ ತೋಟದಲ್ಲಿರುವ ವಾರ್ಡ್‌ ಕಚೇರಿಯಲ್ಲೇ ಸೋಮವಾರ ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಕೃಷ್ಣ ಅವರನ್ನು ಬಂಧಿಸಿದರು. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.