ADVERTISEMENT

₹15 ಲಕ್ಷ ಲಂಚ; ಅಬಕಾರಿ ಇನ್‌ಸ್ಪೆಕ್ಟರ್‌ ಎಸಿಬಿ ಬಲೆಗೆ

ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗೆ ಸನ್ನದು ನೀಡಲು ₹ 15 ಲಕ್ಷ ಲಂಚ

​ಪ್ರಜಾವಾಣಿ ವಾರ್ತೆ
Published 19 ಮೇ 2022, 19:55 IST
Last Updated 19 ಮೇ 2022, 19:55 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಬಾರ್‌ ಮತ್ತು ರೆಸ್ಟೋರೆಂಟ್‌ಗೆ ಸಿಎಲ್‌–7 ಸನ್ನದು ನೀಡಲು ಲಂಚ ಪಡೆದ ಆರೋಪಿ ಕೆಂಗೇರಿ ವಲಯದ ಅಬಕಾರಿ ಇನ್‌ಸ್ಪೆಕ್ಟರ್‌ ಮಂಜುನಾಥ್‌ ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಬಲೆಗೆ ಬಿದ್ದಿದ್ದಾರೆ.

ನಗರದ ವಿವಿಧ ಕಡೆ ಬಾರ್ ಮತ್ತು ರೆಸ್ಟೋರೆಂಟ್‌ ಹಾಗೂ ಲಾಡ್ಜ್‌ಗಳನ್ನು ನಡೆಸುತ್ತಿದ್ದ ಸುಂಕದಕಟ್ಟೆ ನಿವಾಸಿಯೊಬ್ಬರು ಸಿಎಲ್‌–7 ಸನ್ನದು ಮಂಜೂರು ಮಾಡುವಂತೆ ಕೋರಿ ಕೆಂಗೇರಿಯ ಅಬಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅಬಕಾರಿ ಆಯುಕ್ತರು ಈ ಅರ್ಜಿಗೆ ಸಂಬಂಧಿಸಿದ ಸ್ಥಳ ಪರಿಶೀಲಿಸಿ ನಿಯಮಾನುಸಾರ ಸನ್ನದು ನೀಡುವಂತೆ ಮಂಜುನಾಥ್‌ ಅವರಿಗೆ ಸೂಚಿಸಿದ್ದರು.

ಸನ್ನದು ನೀಡಲು ಮಂಜುನಾಥ್‌ ಅವರು ₹ 15 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮುಂಗಡವಾಗಿ ₹ 11 ಲಕ್ಷ ಪಡೆದಿದ್ದರು. ಇನ್ನುಳಿದ ₹ 4 ಲಕ್ಷ ಮೊತ್ತವನ್ನು ಮಂಜುನಾಥ್‌ ಅವರು ಅರ್ಜಿದಾರರಿಂದ ಸ್ವೀಕರಿಸುವಾಗ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಮತ್ತು ಸಿಬ್ಬಂದಿ ಅವರನ್ನು ಬಂಧಿಸಿದರು ಎಂದು ಎಸಿಬಿ ಪ್ರಕಟಣೆ ತಿಳಿಸಿದೆ.

ADVERTISEMENT

‘ತನಿಖೆ ವೇಳೆ ಆರೋಪಿಯ ಬಳಿ ₹ 1.02 ಲಕ್ಷ ನಗದು ಪತ್ತೆಯಾಗಿದೆ. ಆರೋಪಿಯಿಂದ ಲಂಚದ ಹಣ ಹಾಗೂ ಹೆಚ್ಚುವರಿಯಾಗಿ ಸಿಕ್ಕ ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ಎಸಿಬಿ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.