ಬೆಂಗಳೂರು: ಜೆ.ಪಿ.ನಗರ ಏಳನೇ ಹಂತದ ಬ್ರಿಗೇಡ್ ಮಿಲೇನಿಯಂ ಆಸುಪಾಸಿನಲ್ಲಿ ಮಳೆನೀರು ಚರಂಡಿಗಳಿಂದ ಹೂಳನ್ನು ಹೊರತೆಗೆದು ಪಕ್ಕದಲ್ಲೇ ರಾಶಿ ಹಾಕಿ ಎರಡು ವಾರಗಳಿಂದ ಹಾಗೆಯೇ ಬಿಟ್ಟಿದ್ದು, ಅದು ಮತ್ತೆ ಚರಂಡಿಯನ್ನು ಸೇರುತ್ತಿದೆ!
ಬ್ರಿಗೇಡ್ ಮಿಲೇನಿಯಂ ವಸತಿ ಸಮುಚ್ಚಯದ ಹಿಂಭಾಗದ ರಸ್ತೆ ಚಿಕ್ಕದಾಗಿದ್ದು ಅಲ್ಲಿ ಶಾಲಾ ಮಕ್ಕಳ ವಾಹನಗಳೂ ಸೇರಿದಂತೆ ಅನೇಕ ವಾಹನಗಳು ಸಂಚರಿಸುತ್ತವೆ. ಚರಂಡಿಯಿಂದ ತೆಗೆದ ಹೂಳು ಈ ಚಿಕ್ಕ ರಸ್ತೆಯ ಮೂರು ನಾಲ್ಕು ಅಡಿ ಜಾಗವನ್ನು ಆಕ್ರಮಿಸಿಕೊಂಡಿದ್ದು, ವಾಹನಗಳ ಸಂಚಾರಕ್ಕೂ ಅಡ್ಡಿಯಾಗಿದೆ. ಈ ವಾಹನಗಳು ಆ ಹೂಳಿನ ಮೇಲೆಯೇ ಹೋಗಿದ್ದರಿಂದ ಅದು ನೆಲಕ್ಕೇ ಸವರಿದಂತೆ ಆಗಿದೆ.
‘ಮನೆಗಳಿಗೆ ಮಳೆ ನೀರು ನುಗ್ಗುವುದನ್ನು ತಡೆಯುವ ದೃಷ್ಟಿಯಿಂದ ಚರಂಡಿಯಿಂದ ಹೂಳನ್ನು ತೆಗೆಯಲಾಗುತ್ತಿದೆ. ಆದರೆ, ತೆಗೆದ ಹೂಳನ್ನು ಆಗಿಂದಾಗ್ಗೆ ವಿಲೇವಾರಿ ಮಾಡದಿರುವುದರಿಂದ, ಮತ್ತೆ ಅದೇ ಚರಂಡಿಗೆ ಸೇರುತ್ತಿದೆ. ಎಂದಿನಂತೆ ಮಳೆ ಬಂದಾಗ ನೀರು ರಸ್ತೆಯ ಮೇಲೆ ಹರಿದು ಮನೆಗಳಿಗೆ ನುಗ್ಗುತ್ತದೆ. ರಸ್ತೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗುತ್ತದೆ‘ ಎಂದು ನಾಗರಿಕರು ಬೇಸರ ವ್ಯಕ್ತಪಡಿಸುತ್ತಾರೆ.
ಜೆ.ಪಿ.ನಗರದ ವಿವಿಧ ಬಡಾವಣೆಗಳಲ್ಲಿ ಚರಂಡಿಯಿಂದ ಹೂಳು ತೆಗೆಯುವ ಕೆಲಸ ನಡೆಯುತ್ತಿದೆ. ಎಲ್ಲೆಲ್ಲಿ ಚರಂಡಿ ಸ್ವಚ್ಛಗೊಳಿಸಲಾಗುತ್ತಿದೆಯೋ, ಅಲ್ಲೆಲ್ಲ ಇದೇ ಪರಿಸ್ಥಿತಿಯಿದೆ.
ನಗರದಲ್ಲಿ ಬಿರುಸಿನ ಮಳೆಯಾಗುವ ಮುನ್ಸೂಚನೆಯಿದ್ದು, ಚರಂಡಿ ಪಕ್ಕದಲ್ಲಿ ರಾಶಿಯಾಗಿರುವ ಹೂಳನ್ನು ತಕ್ಷಣವೇ ಬೇರೆಡೆಗೆ ಸಾಗಿಸುವ ಕೆಲಸವಾಗಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.