ಬೆಂಗಳೂರು: ಬಿಜೆಪಿಗೆ ಮಾರಾಟವಾಗಿರುವ ಅವಕಾಶವಾದಿ ರಾಜಕಾರಣಿ, ನೀತಿ ಮತ್ತು ನೈತಿಕತೆ ಇಲ್ಲದ ಎಚ್. ವಿಶ್ವನಾಥ್ ಅವರಿಗೆ ಬುದ್ಧಿ ನಿಯಂತ್ರಣದಲ್ಲಿಲ್ಲ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಂದಿಸುತ್ತಿದ್ದಾರೆ ಎಂದು ರಾಮಮನೋಹರ್ ಲೋಹಿಯಾ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಸ್. ಶಿವಣ್ಣ ಟೀಕಿಸಿದ್ದಾರೆ.
ಕುರುಬ ಸಮುದಾಯದವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ವಿಷಯದಲ್ಲಿ ಮುಖ್ಯಮಂತ್ರಿಯವರ ವಿರುದ್ಧ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಪಕ್ಷದಿಂದ ಪಕ್ಷಕ್ಕೆ ಹಾರಿ ಸ್ವಾರ್ಥ ರಾಜಕಾರಣ ಮಾಡುತ್ತಿರುವ ವಿಶ್ವನಾಥ್‌ಗೆ ರಾಜಕೀಯಕ್ಕಾಗಿ ಯಾವ ಹಂತಕ್ಕೂ ಇಳಿಯಬಲ್ಲರು. ದೇವರಾಜ ಅರಸು ಅವರ ಬೆನ್ನಿಗೆ ಚೂರಿ ಹಾಕಿದ್ದ ಅವರು ಈಗ ಅರಸು ಅವರನ್ನು ಪುಣ್ಯಾತ್ಮ ಎಂದು ಕರೆಯುತ್ತಿರುವುದು ದುರಂತ. ಸಂಸದರಾಗಿದ್ದಾಗ ಒಂದು ಬಾರಿಯೂ ಕುರುಬರ ಬಗ್ಗೆ ಮಾತನಾಡದೇ, ಹಿಂದುಳಿದವರಿಗೆ ಅಧಿಕಾರ ಕೊಡಿಸಲು ಪ್ರಯತ್ನಿಸದೇ, ತನ್ನ ಮಗನನ್ನು ಮಾತ್ರ ಜಿಲ್ಲಾ ಪಂಚಾಯಿತಿ ಸದಸ್ಯರನ್ನಾಗಿ ಮಾಡಿ ಸ್ವಾರ್ಥ ಪ್ರದರ್ಶಿಸಿದ್ದರು. ವಿಶ್ವನಾಥ್ ಅವರು ಸಿದ್ದರಾಮಯ್ಯರ ಶ್ರಮ ಇಲ್ಲದೇ ಇದ್ದಿದ್ದರೆ ಸಂಸದರೂ ಆಗುತ್ತಿರಲಿಲ್ಲ ಎಂದು ಹೇಳಿದ್ದಾರೆ.
ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾಗ ಬಿಜೆಪಿಗೆ ಮಾರಾಟವಾದರು. 2024ರ ಲೋಕಸಭಾ ಚುನಾವಣೆಯ ವೇಳೆ ಟಿಕೆಟ್ ಕೇಳಿಕೊಂಡು ಕೆಪಿಸಿಸಿ ಕಚೇರಿ ವೇದಿಕೆಯಲ್ಲಿ ಕುಳಿತಿದ್ದರು. ವಿಧಾನಪರಿಷತ್ ಸ್ಥಾನ ಹೋಗುತ್ತದೆ ಎಂಬ ಅಭಿಪ್ರಾಯ ಬಂದೊಡನೆ ವೇದಿಕೆಯಿಂದ ನೆಗೆದು ಓಡಿ ಹೋಗಿದ್ದರು. ಈಗ ತಾನು ಇನ್ನೂ ಬದುಕಿರುವುದನ್ನು ತೋರಿಸಲು ಸುದ್ದಿಗೋಷ್ಠಿ ಮಾಡಿ ಸಿದ್ದರಾಮಯ್ಯರನ್ನು ನಿಂದಿಸಿದ್ದಾರೆ. ಕೆಟ್ಟ ನಡವಳಿಕೆಯ ಕಾರಣಕ್ಕೆ ಅವರನ್ನು ಸಮುದಾಯದಿಂದ ಜನರು ಹೊರಗಿಟ್ಟಿದ್ದಾರೆ ಎಂದು ಶಿವಣ್ಣ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.