ADVERTISEMENT

ಯಶವಂತಪುರಕ್ಕೆ ಅಭ್ಯರ್ಥಿ ಘೋಷಣೆ | BSY ನಡೆಯಿಂದ ಮೈತ್ರಿಗೆ ಧಕ್ಕೆ: ಜವರಾಯಿಗೌಡ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 18:14 IST
Last Updated 28 ಜುಲೈ 2025, 18:14 IST
ಜವರಾಯಿಗೌಡ
ಜವರಾಯಿಗೌಡ   

ಕೆಂಗೇರಿ: ‘ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರು ಮುಂದಿನ ಚುನಾವಣೆಗೆ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಏಕಾಏಕಿ ಘೋಷಿಸಿರುವುದು ದುಡುಕಿನ ನಿರ್ಧಾರವಾಗಿದೆ. ಇದು ಮೈತ್ರಿ ಧರ್ಮಕ್ಕೆ ಮಾಡಿದ ಅಪಚಾರ’ ಎಂದು ವಿಧಾನ ಪರಿಷತ್‌ನ ಜೆಡಿಎಸ್‌ ಸದಸ್ಯ ಟಿ.ಎನ್.ಜವರಾಯಿಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮುಂದಿನ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್.ರುದ್ರೇಶ್ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ. ಅನುಭವಿ ರಾಜಕಾರಣಿಯೊಬ್ಬರು ಹೀಗೆ ಏಕಾಏಕಿ ಅಭ್ಯರ್ಥಿ ಹೆಸರು ಘೋಷಿಸಿರುವುದು, ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಯಡಿಯೂರಪ್ಪ ಅವರು ಯಾವ ಅರ್ಥದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ತಿಳಿಯುತ್ತಿಲ್ಲ. ಈ ಹೇಳಿಕೆ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟಿರುವ ಅರ್ಥವನ್ನು ಮೂಡಿಸುವಂತಿದೆ. ಇದರಿಂದ ಕಾರ್ಯಕರ್ತರ ಮನಸ್ಸಿಗೆ ಘಾಸಿಯಾಗಿದೆ’ ಎಂದರು.

ADVERTISEMENT

‘ಎಚ್‌.ಡಿ.ದೇವೇಗೌಡ, ಎಚ್‌.ಡಿ. ಕುಮಾರಸ್ವಾಮಿ ಹಾಗೂ ಮೈತ್ರಿ ಪಕ್ಷದ ಬಿಜೆಪಿಯ ಮುಖಂಡರ ನೇತೃತ್ವದಲ್ಲಿ ನಿರ್ಧಾರವಾಗುವ ಒಮ್ಮತದ ಅಭ್ಯರ್ಥಿಗಷ್ಟೇ ನಮ್ಮ ಬೆಂಬಲ’ ಎಂದು ತಿಳಿಸಿದರು.

‘ಮುಂಬರುವ ಚುನಾವಣೆಯಲ್ಲಿ ಯಶವಂತಪುರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿ ಗೆಲುವು ಸಾಧಿಸುವುದು ಬಹುತೇಕ ಖಚಿತವಾಗಿದೆ. ಜೆಡಿಎಸ್ ಪಕ್ಷ ಈ ಕ್ಷೇತ್ರದಲ್ಲಿ ಭದ್ರ ನೆಲೆ ಹೊಂದಿದೆ. ಕುಮಾರಸ್ವಾಮಿ ಅಥವಾ ನಿಖಿಲ್ ಸ್ಪರ್ಧಿಸಿದರೆ ಸಂಪೂರ್ಣ ಬೆಂಬಲ ನೀಡುವುದಾಗಿ ಹೇಳಿದರು. ಯಾವುದೇ ಕಾರಣಕ್ಕೂ ಕ್ಷೇತ್ರ ಹಾಗೂ ರಾಜಕಾರಣದಿಂದ ಹಿಂದೆ ಸರಿಯುವುದಿಲ್ಲ. ಎಲ್ಲ ವಿದ್ಯಮಾನಗಳನ್ನು ಜೆಡಿಎಸ್ ವರಿಷ್ಠರ ಗಮನಕ್ಕೆ ತರಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.