ADVERTISEMENT

ಉಪನಗರ ರೈಲಿಗೆ ಸಿಗದ ‘ಗ್ರೀನ್‌ ಸಿಗ್ನಲ್‌’

ಬಜೆಟ್‌ನಲ್ಲಿ ನಿಗದಿಯಾಗದ ನಿರೀಕ್ಷಿತ ಅನುದಾನ l ಹೋರಾಟಗಾರರಿಗೆ ನಿರಾಸೆ

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 20:04 IST
Last Updated 1 ಫೆಬ್ರುವರಿ 2019, 20:04 IST
ಉಪನಗರ ರೈಲು
ಉಪನಗರ ರೈಲು   

ಬೆಂಗಳೂರು: ನಗರದಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಮಂಜೂರಾಗಿರುವ ಉಪನಗರ ರೈಲು ಯೋಜನೆಅನುಷ್ಠಾನ ಕೇವಲ ರಾಜಕೀಯ ಭರವಸೆಗಳಿಗೆ ಸೀಮಿತ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

₹17 ಸಾವಿರ ಕೋಟಿ ಮೊತ್ತದ ಯೋಜನೆಗೆ ಸಚಿವ ಪೀಯೂಷ್‌ ಗೋಯಲ್‌ ಮಂಡಿಸಿದಮಧ್ಯಂತರ ಬಜೆಟ್‌ನಲ್ಲಿ ಕೇವಲ ₹ 10 ಕೋಟಿ ಮೀಸಲಿಡಲಾಗಿದೆ. ಇದು ಮುಂದಿನ ಒಂದು ವರ್ಷ ಯೋಜನೆಕಾರ್ಯಾರಂಭದ ಸಾಧ್ಯತೆಯನ್ನು ತಳ್ಳಿ ಹಾಕಿದೆ.

ಯೋಜನೆಯ ಕಾರ್ಯಸಾಧ್ಯತೆ ವರದಿ ಅನುಮೋದನೆ ಹಿನ್ನೆಡೆಗೆ ರಾಜ್ಯ ಸರ್ಕಾರದ ಷರತ್ತುಗಳು ಕಾರಣವಾಗಿವೆ. ಇದರಿಂದ ಯೋಜನೆ ಅನುಷ್ಠಾನದ ಪ್ರಯತ್ನ ಕೆಲ ತಿಂಗಳಿನಿಂದ ವೇಗ ಕಳೆದುಕೊಂಡಿದೆ. ವರದಿಯನ್ನು ರೈಲ್ವೆ ಮಂಡಳಿ ತಿರಸ್ಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಎರಡು ವರ್ಷಗಳ ಬಳಿಕ ಉಪನಗರ ರೈಲು ಜಾಲದ ಒಪ್ಪಂದಕ್ಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಹಿ ಹಾಕಿದ್ದವು. ಅವು ಸದ್ಯ ಯೋಜನೆಯ ವಿಳಂಬಕ್ಕೆ ಕಾರಣಗಳನ್ನು ಹುಡುಕುತ್ತಿವೆ’ ಎಂದು ಉಪನಗರ ರೈಲು ಸೌಲಭ್ಯಕ್ಕಾಗಿ ಹೋರಾಡುತ್ತಿರುವ ಕಾರ್ಯಕರ್ತರು ದೂರಿದರು.

‘₹10 ಕೋಟಿ ಅನುದಾನ ಮತ್ತು ₹17 ಸಾವಿರ ಕೋಟಿಯೋಜನಾ ವೆಚ್ಚ– ಇವೆರಡರ ನಡುವಿನ ಅಂತರ ಜನರ ಆಶೋತ್ತರಗಳಿಗೆ ಒಂದುಸರ್ಕಾರ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಪ್ರತಿಫಲಿಸುತ್ತದೆ’ ಎಂದು ಸಿಟಿಜನ್ಸ್‌ ಫಾರ್‌ ಬೆಂಗಳೂರು ಸಂಘಟನೆಯ ಶ್ರೀನಿವಾಸಅಲವಿಲ್ಲಿ ಅಕ್ರೋಶ ವ್ಯಕ್ತಪಡಿಸಿದರು.

‘ಬೈಯಪ್ಪನಹಳ್ಳಿ–ಹೊಸೂರು ಮತ್ತು ಯಶವಂತಪುರ–ಚನ್ನಸಂದ್ರ ಮಾರ್ಗದಡಬ್ಲಿಂಗ್ ಯೋಜನೆಗೆ ಬಜೆಟ್‌ನಲ್ಲಿಅನುದಾನ ಘೋಷಿಸಲಾಗಿದೆ.ಕಂಟೋನ್ಮೆಂಟ್‌–ವೈಟ್‌ಫೀಲ್ಡ್‌ ಮಾರ್ಗವನ್ನು ಚತುಷ್ಪಥಗೊಳಿಸಲುಹೆಚ್ಚು ಅನುದಾನ ಬೇಕಾಗುತ್ತದೆ. ಬೆಂಗಳೂರು ವಿಭಾಗದಲ್ಲಿಸ್ವಯಂಚಾಲಿತ ಸಿಗ್ನಲಿಂಗ್‌ ಮತ್ತು ಲೆವೆಲ್‌ ಕ್ರಾಸಿಂಗ್‌ ತೆಗೆದು ಹಾಕಲು ಆದ್ಯತೆ ಕೊಡದಿರುವುದು ನಿರಾಸೆ ಮೂಡಿಸಿದೆ’ ಎಂದು ಸಂಜೀವ ದ್ಯಾಮಣ್ಣನವರ ಬೇಸರ ವ್ಯಕ್ತಪಡಿಸಿದರು.

ಬಜೆಟ್‌: ಯುವಜನತೆ ಹೇಳುವುದೇನು?

ಕಾರ್ಮಿಕರಿಗೆ ಪೂರಕ
ಬಜೆಟ್‌ನಲ್ಲಿ ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಲಾಗಿದೆ. ಕಾರ್ಮಿಕರಿಗೆ ಪಿಂಚಣಿ ಯೋಜನೆ ಘೋಷಿಸಿರುವುದು ಉತ್ತಮ ನಿರ್ಧಾರ. ಅಂಗನವಾಡಿ ಕಾರ್ಯಕರ್ತರ ಬಗೆಗೂ ಹೆಚ್ಚು ಗಮನಹರಿಸಲಾಗಿದೆ.
–ವಿಠ್ಠಲ ಜಾಧವ್‌,ರಂಗಭೂಮಿ ಕಲಾವಿದ

*
ಹೊಸತನಗಳಿಲ್ಲದ ಬಜೆಟ್‌
ಇದು ಆಶ್ವಾಸನೆಗಳ ಬಜೆಟ್ ಆಗದೆ, ಫಲಾನುಭವಿಗಳಿಗೆ ತಲುಪುವ ನಿಜವಾದ ಬಜೆಟ್ ಆಗಬೇಕು.ಪ್ರಸ್ತುತ ವಿದ್ಯಮಾನಗಳಿಗೆ ಅನುಗುಣವಾಗಿ ಮಹಿಳಾ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು. ಆದರೆ, ಬಜೆಟ್‌ನಲ್ಲಿ ಇದ್ಯಾವುದೂ ಕಾಣುತ್ತಿಲ್ಲ.
–ನವ್ಯಾ ಶೆಟ್ಟಿ,ವಿದ್ಯಾರ್ಥಿನಿ

*
ಆದಾಯದ ಮಿತಿ ಹೆಚ್ಚಿಸಬೇಕಿತ್ತು
ಪಿಎಫ್‌ ಮತ್ತು ಇತರ ಮಾನ್ಯ ಮಾಡಲಾದ ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವವರಿಗೆ ₹ 6.5 ಲಕ್ಷದವರೆಗೆ ಆದಾಯವಿದ್ದವರಿಗೆ ತೆರಿಗೆ ವಿನಾಯಿತಿ ನೀಡಿರುವುದು ಉತ್ತಮ ನಿರ್ಧಾರ. ಆದರೆ,₹ 5 ಲಕ್ಷದವರೆಗೆ ಗಳಿಸುವವರು ತೆರಿಗೆ ವಿನಾಯಿತಿ ಪಡೆಯುವ ಆದಾಯದ ಮಿತಿಯನ್ನು ಇನ್ನಷ್ಟು ಹೆಚ್ಚಿಸಬೇಕಿತ್ತು. ಸ್ಟ್ಯಾಂಡರ್ಡ್‌ ಡಿಡಕ್ಷನ್‌ ₹ 50 ಸಾವಿರಕ್ಕೆ ಹೆಚ್ಚಿಸಿರುವುದು ಸ್ವಾಗತಾರ್ಹ.
–ಮಹಾಂತೇಶ್‌ ಬೀಳಗಿ,ಉದ್ಯಮಿ

*
ಶಿಕ್ಷಣಕ್ಕೆ ಆದ್ಯತೆ ಬೇಕಿತ್ತು
ಮಧ್ಯಮ ವರ್ಗದವರನ್ನು ಗಮನದಲ್ಲಿಟ್ಟುಕೊಂಡು ಮಂಡಿಸಿದ ಬಜೆಟ್‌ ಇದು.ಶಿಕ್ಷಣ ರಂಗಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿತ್ತು.
–ಮಂಜು ಪೂಜಾರ,ಶಿಕ್ಷಕ

*
ಪುಡಿಗಾಸು ನೀಡಬೇಡಿ
ಪ್ರಧಾನ ಮಂತ್ರಿ ಕಿಸಾನ್‌ ಸಮ್ಮಾನ್‌ ನಿಧಿ ಸ್ಥಾಪನೆಗೆ ಮುಂದಾಗಿರುವುದು ಸ್ವಾಗತಾರ್ಹ. ಆದರೆ, ರೈತರ ಖಾತೆಗೆ ವಾರ್ಷಿಕ ₹ 6 ಸಾವಿರ ಜಮೆ ಆಗುವ ಮೊತ್ತವನ್ನು ಕನಿಷ್ಠ ₹ 15 ಸಾವಿರದಿಂದ ₹20 ಸಾವಿರಕ್ಕೆ ಏರಿಸಬೇಕಿತ್ತು.₹ 6 ಸಾವಿರ ಮೊತ್ತ ಏನೂ ಸಾಲದು.
–ಮಹೇಶ್‌,ರೈತ

*
ತಂತ್ರಜ್ಞಾನ ನುಂಗಲಾರದ ತುತ್ತಾಗದಿರಲಿ
ಡಿಜಿಟಲ್‌ ಗ್ರಾಮಗಳ ನಿರ್ಮಾಣ ಮಾಡುವ ಮುನ್ನ, ಎಲ್ಲ ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಸುಲಭವಾಗಿ ದೊರಕಬೇಕು. ಗ್ರಾಮೀಣರಿಗೆ ತಂತ್ರಜ್ಞಾನ ನುಂಗಲಾರದ ತುತ್ತಾಗಬಾರದು. ಗ್ರಾಮೀಣ ವಿದ್ಯಾರ್ಥಿಗಳಿಗೆ ಡಿಜಿಟಲ್ ಬೋರ್ಡ್‌ಗಳನ್ನು ಬೇಗ ಪೂರೈಸಲಿ.
–ರಾಣಿ,ವಿದ್ಯಾರ್ಥಿನಿ

*
ರಕ್ಷಣಾ ಕ್ಷೇತ್ರಕ್ಕೆ ಉತ್ತಮ ಕೊಡುಗೆ
ರಕ್ಷಣಾ ವಲಯದ ಬಲವರ್ಧನೆಗೆ ಹೆಚ್ಚು ಮೊತ್ತ ನಿಗದಿಪಡಿಸಿರುವುದು ಹಾಗೂ ಹಿಂದುಳಿದ ವರ್ಗಗಳನ್ನು ಮುಖ್ಯಭೂಮಿಕೆಗೆ ತರಲು ಬಹುಕೋಟಿ ಅನುದಾನ ಮೀಸಲಿಡಲುನಿರ್ಧರಿಸಿರುವುದು ಸ್ವಾಗತಾರ್ಹ.
–ಅನುಷಾ ಶೆಣೈ

*
ಘೋಷಣೆಗಳಿಗೆ ಸೀಮಿತವಾಗದಿರಲಿ
ಇದು ಚುನಾವಣೆ ದೃಷ್ಟಿಯಿಂದ ಜನರನ್ನು ಸೆಳೆಯಲು ಮಂಡಿಸಿರುವ ಬಜೆಟ್. ಎಲ್ಲ ಕ್ಷೇತ್ರದ ಅಭಿವೃದ್ಧಿಗಳತ್ತ ಗಮನಹರಿಸಿರುವುದು ಉತ್ತಮ. ಮಂಡನೆಯಾದ ಯೋಜನೆಗಳು ಎಷ್ಟರ ಮಟ್ಟಿಗೆ ಜನರನ್ನು ತಲುಪುತ್ತವೆ ಎಂಬುದು ಮುಖ್ಯ.
–ಗಿರೀಶ್ ಕನಕಪುರ,ರಂಗಕರ್ಮಿ

*
ಇದು ಹೆದ್ದಾರಿಯ ಜಟಕಾ ಬಂಡಿ!
ಕೇಂದ್ರ ಬಜೆಟ್, ಹೈವೇ ರಸ್ತೆಯಲ್ಲಿ ಜಟಕಾ ಬಂಡಿ ಸವಾರಿ ಮಾಡಿದಂತಿದೆ. ಚುನಾವಣೆಯ ಹೊಸ್ತಿಲಿನಲ್ಲಿ, ಕೆಲ ವರ್ಗದ ಪ್ರಜೆಗಳ ಮೂಗಿಗೆ ತುಪ್ಪ ಸವರುವ ಪ್ರಯತ್ನ ಮಾಡಲಾಗಿದೆ. ಆದರೂ, ಕೆಲವು ನಿರ್ಧಾರಗಳು ಸ್ವಾಗತಾರ್ಹ. ಕಿಸಾನ್ ಯೋಜನೆಯಲ್ಲಿ ನಿರೀಕ್ಷೆ ಇಟ್ಟುಕೊಂಡಿದ್ದ ರೈತರಿಗೆ ನಿರಾಸೆಯಾಗಿದೆ.
–ಕೊಟ್ರೇಶ್ ನಿವೇದನ್,ಹೊಸಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.