ಸಾಂದರ್ಭಿಕ ಚಿತ್ರ
ಬೆಂಗಳೂರು: ‘ರಾಜ್ಯದ ಹಲವೆಡೆ ಹಳ್ಳಿ ಹಳ್ಳಿಗಳಲ್ಲಿ ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟವಾಗುತ್ತಿದೆ. ಅಬಕಾರಿ ಇಲಾಖೆಯು ಮದ್ಯದಂಗಡಿ ಮಾಲೀಕರಿಗೆ ಮಾರಾಟದ ಗುರಿ ನಿಗದಿಪಡಿಸಿರುವುದೇ ಅಕ್ರಮಕ್ಕೆ ಕಾರಣ’ ಎಂಬ ಅಸಮಾಧಾನ ವಿಧಾನಸಭೆಯಲ್ಲಿ ಮಂಗಳವಾರ ವ್ಯಕ್ತವಾಯಿತು.
ಕಾಂಗ್ರೆಸ್‌ನ ಮಹಾಂತೇಶ್ ಕೌಜಲಗಿ ಅವರ ಪ್ರಶ್ನೆಗೆ ಉತ್ತರಿಸಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ, ‘ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ. 2024–25ರಲ್ಲಿ ಈ ಸಂಬಂಧ 17,390 ಪ್ರಕರಣಗಳನ್ನು ದಾಖಲಿಸಿ, 18,253 ಮಂದಿಯನ್ನು ಬಂಧಿಸಲಾಗಿದೆ’ ಎಂದರು.
ಆಗ ಸಚಿವರ ಉತ್ತರಕ್ಕೆ ಬಿಜೆಪಿ, ಜೆಡಿಎಸ್‌ನ ಹಲವರು ಆಕ್ಷೇಪ ವ್ಯಕ್ತಪಡಿಸಿದರು.
‘ಅಬಕಾರಿ ಇಲಾಖೆಯವರು ಪ್ರತಿ ಮದ್ಯದಂಗಡಿಗೂ ಮಾರಾಟದ ಗುರಿ ನಿಗದಿಪಡಿಸಿದೆ. ಗುರಿ ತಲುಪುವುದಕ್ಕಾಗಿ ಹಳ್ಳಿ, ಹಳ್ಳಿಗೂ ಬೈಕ್‌ಗಳಲ್ಲಿ ಮದ್ಯ ತೆಗೆದುಕೊಂಡು ಹೋಗಿ ಮಾರಾಟ ಮಾಡಲಾಗುತ್ತಿದೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್ ಬಾಬು ಹೇಳಿದರು.
‘ಅಬಕಾರಿ ಇಲಾಖೆ ಅಧಿಕಾರಿಗಳು, ಪೊಲೀಸರಿಗೆ ಗೊತ್ತಿಲ್ಲದೇ ಹಳ್ಳಿಗಳಲ್ಲಿ ಮದ್ಯ ಮಾರಾಟ ಆಗುವುದಿಲ್ಲ. ಮಾಮೂಲಿ ತೆಗೆದುಕೊಂಡು ಮದ್ಯದ ಅಕ್ರಮ ಮಾರಾಟಕ್ಕೆ ಅವಕಾಶ ನೀಡುತ್ತಿದ್ದಾರೆ. ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟಕ್ಕೆ ಅಧಿಕೃತ ಪರವಾನಗಿ ಕೊಡಿ. ಸರ್ಕಾರಕ್ಕೂ ತೆರಿಗೆ ಬರುತ್ತದೆ’ ಎಂದು ಬಿಜೆಪಿಯ ಆರಗ ಜ್ಞಾನೇಂದ್ರ ಆಗ್ರಹಿಸಿದರು.
‘ಕಳಪೆ ಗುಣಮಟ್ಟದ ಮದ್ಯವನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೊನಿಗಳಿಗೆ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಆ ಕಾಲೊನಿಗಳಲ್ಲಿ 35ರಿಂದ 40 ವರ್ಷದೊಳಗಿನ ಯುವಕರೂ ಸಾಯುತ್ತಿದ್ದಾರೆ’ ಎಂಬ ಜ್ಞಾನೇಂದ್ರ ಮಾತಿಗೆ ಕಾಂಗ್ರೆಸ್‌ನ ಎಸ್.ಎನ್. ನಾರಾಯಣಸ್ವಾಮಿ ಕೆ.ಎಂ., ‘ಪರಿಶಿಷ್ಟರು ಮಾತ್ರ ಮದ್ಯ ಸೇವಿಸುತ್ತಾರಾ? ನೀವು ಮದ್ಯ ಸೇವಿಸುವುದಿಲ್ಲವೆ? ಪ್ರಮಾಣ ಮಾಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಆರಗ ಜ್ಞಾನೇಂದ್ರ ಗೃಹ ಸಚಿವರಾಗಿದ್ದರು. ಆಗ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಎಷ್ಟು ಅಂಗಡಿಗಳನ್ನು ಬಂದ್ ಮಾಡಿಸಿದ್ದರು ಎಂಬುದನ್ನು ಹೇಳಲಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಬಿಜೆಪಿಯ ಸಿದ್ದು ಸವದಿ, ವಿ. ಸುನಿಲ್ ಕುಮಾರ್ ಸೇರಿದಂತೆ ಹಲವರು ಕಿರಾಣಿ ಅಂಗಡಿಗಳಲ್ಲಿ ಮದ್ಯ ಮಾರಾಟ ತಡೆಗೆ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.