ಕೆರೆ
ಬೆಂಗಳೂರು: ಕೆರೆಗೆ ಬಫರ್ ಝೋನ್ ಮಾರ್ಪಾಟು ಮಾಡುವುದರಿಂದ ಕೆರೆಯ ಸಾಮರ್ಥ್ಯ ಕಡಿಮೆಯಾಗುವುದಿಲ್ಲ. ಬದಲಿಗೆ, ಸಾರ್ವಜನಿಕರಿಗೆ ಉಪಯುಕ್ತವಾಗುವ ಯೋಜನೆಗಳಿಗೆ ಅವಕಾಶ ಕಲ್ಪಿಸಿದಂತಾಗುತ್ತದೆ ಎಂದು ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ಕೆಟಿಸಿಡಿಎ) ತಿಳಿಸಿದೆ.
‘ರಾಜ್ಯದಲ್ಲಿ ಕೆರೆಗಳು ಹಾಗೂ ನಾಲಾಗಳ (ರಾಜಕಾಲುವೆ) ಬಫರ್ ಝೋನ್ ಮಾರ್ಪಾಟು ಮಾಡುವುದರಿಂದ, ಸಂಗ್ರಹ ಸಾಮರ್ಥ್ಯ ಹಾಗೂ ನೀರಿನ ಹರಿವಿಗೆ ಯಾವುದೇ ರೀತಿಯಲ್ಲಿ ಧಕ್ಕೆಯಾಗದಂತೆ ನಾಗರಿಕರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಬಫರ್ ಝೋನ್‌ನಲ್ಲಿ ಅನುಷ್ಠಾನ ಮಾಡಬಹುದು’ ಎಂದು ತನ್ನ ಹೇಳಿಕೆಯಲ್ಲಿ ಪ್ರತಿಪಾದಿಸಿದೆ.
‘ಹಲವು ಪ್ರಕರಣಗಳಲ್ಲಿ ಕೆರೆಯ ಬಫರ್ ಝೋನ್ ಖಾಸಗಿ ಸ್ವತ್ತಾಗಿದ್ದು, ಅದನ್ನು ‘ನಿರ್ಮಾಣರಹಿತ ವಲಯವನ್ನಾಗಿ’ ಘೋಷಿಸಲಾಗುತ್ತದೆ. ಬಫರ್ ಝೋನ್ ಮಾರ್ಪಾಟು ಮಾಡುವುದರಿಂದ ಪ್ರವಾಹದ ಸಂಕಷ್ಟ ಎದುರಾಗುವುದಿಲ್ಲ. ಉತ್ತಮ ಮೂಲಸೌಕರ್ಯಗಳನ್ನು ಅಲ್ಲಿ ಅಭಿವೃದ್ಧಿಪಡಿಸುವುದರಿಂದ ಪ್ರವಾಹದ ಸಂಕಷ್ಟ ಇಲ್ಲದಂತಾಗುತ್ತದೆ’ ಎಂದು ತಿಳಿಸಿದೆ.
‘ಬಫರ್ ಝೋನ್ ಮಾರ್ಪಾಟಿನಿಂದ ರಿಯಲ್ ಎಸ್ಟೇಟ್ ಅಭಿವೃದ್ಧಿಗಾಗಿ ಅಲ್ಲ. ವಿಭಿನ್ನ ಅಳತೆಗಳಲ್ಲಿರುವ ಕೆರೆಗಳಲ್ಲಿ ಬಫರ್ ಝೋನ್‌ನ ಏಕರೂಪತೆ ತರಲು ಸಾಧ್ಯವಾಗುತ್ತದೆ. ಅಲ್ಲದೆ, ಜೀವವೈವಿಧ್ಯತೆಗೆ ಮಾರಕವಾಗುವುದಿಲ್ಲ. ಸರ್ಕಾರದ ನಗರ ಮೂಲಸೌಕರ್ಯ ಯೋಜನೆಗಳಿಗೆ ನೆರವಾಗುತ್ತದೆ. ಕೆರೆಗಳ ಸಮೀಪ ಎಸ್‌ಟಿಪಿಗಳನ್ನು ಅಳವಡಿಸುವುದರಿಂದ ಕೆರೆಗಳಿಗೆ ಮಾಲಿನ್ಯ ಹರಿಯುವುದಕ್ಕೆ ತಡೆಯಾಗುತ್ತದೆ’ ಎಂದು ಕೆಟಿಸಿಡಿಎ ಹೇಳಿದೆ.
‘ಪ್ರಸ್ತಾವಿತ ಮಾರ್ಪಾಟಿನಿಂದ, ಪರಿಸರ ಸಂರಕ್ಷಣೆಯಲ್ಲಿ ಸಮತೋಲನ ಬರಲಿದೆ. ನಾಗರಿಕ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಜಲಮೂಲವನ್ನು ಸಂರಕ್ಷಿಸಿದಂತಾಗುತ್ತದೆ. ನೀರಿನ ಕೊಳವೆ, ಒಳಚರಂಡಿ ಮಾರ್ಗ, ವಿದ್ಯುತ್ ಮಾರ್ಗ ಇತ್ಯಾದಿಗಳನ್ನು ಬಫರ್ ಝೋನ್‌ನಲ್ಲಿ ಅಳವಡಿಸುವ ಮೂಲಕ ನಗರ ಪ್ರದೇಶಗಳಲ್ಲಿ ಒಟ್ಟಾರೆ ಮೂಲಸೌಕರ್ಯವನ್ನು ಹೆಚ್ಚಿಸಬಹುದಾಗಿದೆ’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.