ADVERTISEMENT

ಬುಲೆಟ್ ಕದ್ದು ₹ 10 ಸಾವಿರಕ್ಕೆ ಮಾರುತ್ತಿದ್ದರು!

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2018, 19:22 IST
Last Updated 7 ಅಕ್ಟೋಬರ್ 2018, 19:22 IST

ಬೆಂಗಳೂರು: ರಾಯಲ್‌ ಎನ್‌ಫೀಲ್ಡ್ ಹಾಗೂ ಕೆಟಿಎಂ ಡ್ಯೂಕ್ ಬೈಕ್‌ಗಳನ್ನೇ ಕಳವು ಮಾಡುತ್ತಿದ್ದ ಮೂವರು ಚಾಲಾಕಿ ಕಳ್ಳರನ್ನು ಬಂಧಿಸಿರುವ ವರ್ತೂರು ಪೊಲೀಸರು, ₹ 30 ಲಕ್ಷ ಮೌಲ್ಯದ 16 ಬೈಕ್‌ಗಳನ್ನು ಜಪ್ತಿ ಮಾಡಿದ್ದಾರೆ.

ಅತ್ತಿಬೆಲೆಯ ಅಸ್ಮತ್‌ ಖಾನ್ ಅಲಿಯಾಸ್ ಬುಲೆಟ್, ಸಂತೋಷ್ ಹಾಗೂ ಮಂಜುನಾಥ್ ಎಂಬುವರನ್ನು ಬಂಧಿಸಲಾಗಿದೆ. ರಾತ್ರಿ ವೇಳೆ ಪ್ರಮುಖ ರಸ್ತೆಗಳಲ್ಲಿ ಸುತ್ತುತ್ತಿದ್ದ ಇವರು, ಹ್ಯಾಂಡಲ್ ಲಾಕ್ ಮುರಿದು ಬೈಕ್‌ಗಳನ್ನು ಕದ್ದೊಯ್ಯುತ್ತಿದ್ದರು.

ಬಳಿಕ ಅತ್ತಿಬೆಲೆ ಸುತ್ತಮುತ್ತಲ ಗ್ರಾಮಸ್ಥರಿಗೆ ₹10 ಸಾವಿರಕ್ಕೆ ಒಂದರಂತೆ ಮಾರಾಟ ಮಾಡುತ್ತಿದ್ದರು. ಬಂದ ಹಣವನ್ನು ಗಾಂಜಾ ಹಾಗೂ ಮದ್ಯ ಖರೀದಿಗೆ ಬಳಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ADVERTISEMENT

ಇವರ ವಿರುದ್ಧ ತಿಲಕ್‌ನಗರ, ಅತ್ತಿಗುಪ್ಪೆ, ಸುದ್ದಗುಂಟೆಪಾಳ್ಯ, ಮೈಕೊಲೇಔಟ್ ಠಾಣೆಗಳಲ್ಲಿ ವಾಹನ ಕಳವು ಪ್ರಕರಣಗಳು ದಾಖಲಾಗಿದ್ದವು. ಅಲ್ಲದೇ, ವ್ಯಕ್ತಿಯೊಬ್ಬರನ್ನು ಅಪಹರಿಸಿ ಹಲ್ಲೆ ನಡೆಸಿದ್ದ ಆರೋಪದಡಿ ಸೂರ್ಯನಗರ ಠಾಣೆಯಲ್ಲೂ ಎಫ್‌ಐಆರ್ ದಾಖಲಾಗಿತ್ತು.‌

ಸಿ.ಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಗಳ ಸುಳಿವು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.