ಬೆಂಗಳೂರು: ಬುರ್ಖಾ ಧರಿಸಿ ಪ್ರಯಾಣಿಕರ ಸೋಗಿನಲ್ಲಿ ಬಸ್‌ಗಳಲ್ಲಿ ಪ್ರಯಾಣಿಕರ ಬ್ಯಾಗ್‌ಗಳಿಂದ ಚಿನ್ನಾಭರಣ ಕಳವು ಮಾಡುತ್ತಿದ್ದ ಮೂವರು ಮಹಿಳೆಯರನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಲಬುರ್ಗಿ ಜಿಲ್ಲೆಯ ಅನು, ಪ್ರಾರ್ಥನಾ ಮತ್ತು ಪದ್ಮಾ ಅವರನ್ನು ಬಂಧಿಸಿ, ₹16 ಲಕ್ಷ ಮೌಲ್ಯದ 190 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ಬಂಧನದಿಂದ ಮೂರು ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾದವಾರದ ನಿವಾಸಿಯೊಬ್ಬರು ಹಾಸನಕ್ಕೆ ಹೋಗಲು 8ನೇ ಮೈಲಿ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಮೂವರು ಮಹಿಳೆಯರು ಸಹ ತಳ್ಳಿಕೊಂಡು ಹತ್ತಿದ್ದಾರೆ. ಬಸ್ ಸ್ವಲ್ಪ ದೂರ ಹೋಗುತ್ತಿದ್ದಂತೆ ಸೀಟು ಇಲ್ಲವೆಂದು ಹೇಳಿ ಇಳಿದು ಹೋಗಿದ್ದಾರೆ. ಬಸ್ ನೆಲಮಂಗಲದ ಅರಸಿನಕುಂಟೆ ಬಳಿ ಹೋಗುತ್ತಿದ್ದಾಗ ವ್ಯಾನಿಟಿ ಬ್ಯಾಗ್ ಪರಿಶೀಲಿಸಿದಾಗ ಅದರಲ್ಲಿದ್ದ 50 ಗ್ರಾಂ ತೂಕದ ಆಭರಣ ಇರಲಿಲ್ಲ. ಮೂವರು ಮಹಿಳೆಯರ ಮೇಲೆ ಅನುಮಾನ ವ್ಯಕ್ತಪಡಿಸಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆ ಕೈಗೊಂಡ ಪೊಲೀಸರು, ಬಾತ್ಮಿದಾರರ ಮಾಹಿತಿ ಆಧರಿಸಿ 8ನೇ ಮೈಲಿ ಬಸ್ ನಿಲ್ದಾಣ ಬಳಿ ಮೂವರು ಬುರ್ಖಾಧಾರಿ ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದಾಗಿ ಒಪ್ಪಿಕೊಂಡರು. ಇದೇ ರೀತಿ ಪೀಣ್ಯದಲ್ಲಿ ಮೂರು ಕಡೆ ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ನೀಡಿದ ಮಾಹಿತಿ ಆಧರಿಸಿ ಯಶವಂತಪುರ ರೈಲ್ವೆ ಹಳಿ ಬಳಿಯ ಶೆಡ್‌ನಲ್ಲಿ ಬಚ್ಚಿಟ್ಟಿದ್ದ 190 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುವ ಮಹಿಳೆಯರನ್ನೇ ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.