
ಕೆ.ಆರ್.ಪುರ: ಒಂದೆಡೆ ವೈಟ್‌ಫೀಲ್ಡ್‌ನ ಐಟಿಬಿಟಿಗೆ ಇನ್ನೊಂದೆಡೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ, ಅತಿ ಹೆಚ್ಚು ಪ್ರಯಾಣಿಕರಿರುವ ಬೂದಿಗೆರೆ ಕ್ರಾಸ್ ಬಳಿ ಬಸ್ ತಂಗುದಾಣವಿಲ್ಲದೆ ನಾಗರಿಕರು ಮರಗಳನ್ನು ಆಶ್ರಯಿಸುವಂತಾಗಿದೆ.
ಮಹದೇವಪುರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಬೂದಿಗೆರೆ ಕ್ರಾಸ್, ರಾಷ್ಟ್ರೀಯ ಹೆದ್ದಾರಿ 75ಕ್ಕೆ ಹೊಂದಿಕೊಂಡಿದೆ. ಇದು ಆಂಧ್ರಪ್ರದೇಶ, ತಮಿಳುನಾಡು, ಕರ್ನಾಟಕ ರಾಜ್ಯದ ಪ್ರಮುಖ ನಗರಗಳಿಗೆ ಸಾರಿಗೆ ವ್ಯವಸ್ಥೆಯ ಪ್ರಮುಖ ಕೊಂಡಿಯಾಗಿದೆ. ಹೆದ್ದಾರಿಗೆ ಹೊಂದಿಕೊಂಡಂತೆ ಬೂದಿಗೆರೆ ಕ್ರಾಸ್ ಬಸ್ ನಿಲ್ದಾಣವಿದ್ದು ಜನಸಂದಣಿ ಹೆಚ್ಚಿರುವ ಪ್ರದೇಶವೂ ಆಗಿದೆ.
ಬೂದಿಗೆರೆ ಕ್ರಾಸ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೆಚ್ಚು ಜನಸಾಂದ್ರತೆಯನ್ನು ಹೊಂದಿದ್ದು, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅವಲಂಬಿಸಿದ್ದಾರೆ. ಆದರೆ ಕೆಲ ವರ್ಷಗಳಿಂದ ಬಸ್ ತಂಗುದಾಣವಿಲ್ಲದೆ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಖಾಸಗಿ ಉದ್ಯೋಗಿ ಸುಪ್ರಿಯ ಹೇಳಿದರು.
ಬೂದಿಗೆರೆ ಕ್ರಾಸ್ ನಿಂದ ಸ್ಥಳೀಯ ಗ್ರಾಮಗಳಾದ ಮಂಡೂರು, ಹಂಚರಹಳ್ಳಿ ಕಟ್ಟಿಗೆನಹಳ್ಳಿ, ಜ್ಯೋತಿಪುರ, ಬೊಮ್ಮನಹಳ್ಳಿ, ನಿಂಬೆಕಾಯಿಪುರ ಊರುಗಳಿಗೆ ಇಲ್ಲಿಂದಲೇ ತೆರಳಬೇಕಿದೆ.ಇಲ್ಲಿಗೆ ಬಂದು ಹೋಗುವ ಹೊರ ರಾಜ್ಯದ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ.
‘ಬೂದಿಗೆರೆ ಕ್ರಾಸ್ ಬಳಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಜನಸಂದಣಿ ಹೆಚ್ಚಾಗಿರುವ ಪ್ರದೇಶವಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳಾಗಲಿ ಅಥವಾ ಜನಪ್ರತಿನಿಧಿಯಾಗಲಿ ಬಸ್ ತಂಗುದಾಣ ನಿರ್ಮಾಣಕ್ಕೆ ಮುಂದಾಗಿಲ್ಲ’ ಎಂದು ಸ್ಥಳೀಯ ಕಾಂಗ್ರೆಸ್ ಮುಖಂಡ ಬಿದರಹಳ್ಳಿ ವರುಣ್ ದೂರಿದರು.
‘ಮಳೆ, ಚಳಿ, ಗಾಳಿಗೆ ಮರಗಳನ್ನೆ ಆಶ್ರಯಿಸಿ ಪ್ರಯಾಣಿಕರು ನಿಲ್ಲಬೇಕಿದೆ. ಇದು ಜನರಿಗೆ ಹೆಚ್ಚು ತ್ರಾಸದಾಯಕವಾಗಿದೆ. ಈ ಭಾಗದಲ್ಲಿ ಅಂತರರಾಷ್ಟ್ರೀಯ ವಿಮಾನದ ಜೊತೆಗೆ ಐಟಿಬಿಟಿ ಹೊಂದಿರುವ ಪ್ರದೇಶ ಇದಾಗಿರುವುದರಿಂದ ತಂಗುದಾಣ ನಿರ್ಮಾಣ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ’ ಎಂದು ಬಿದರಹಳ್ಳಿ ಹೋಬಳಿಯ ಪಂಚ ಗ್ಯಾರೆಂಟಿ ಯೋಜನೆಗಳ ಅಧ್ಯಕ್ಷ ಪ್ರಶಾಂತ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.