ಬೆಂಗಳೂರು: ಬೆಂಗಳೂರು ಜಲಮಂಡಳಿ ವ್ಯಾಪ್ತಿಯಲ್ಲಿ ನಿತ್ಯ ಕೆಲಸ ಮಾಡುವ 700ಕ್ಕೂ ಹೆಚ್ಚು ಸ್ವಚ್ಛತಾ ಕಾರ್ಮಿಕರಿಗೆ ಅನ್ನಪೂರ್ಣ ಯೋಜನೆ ಜಾರಿಗೊಳಿಸಲಾಗಿದೆ.
ಸೋಮವಾರ ನಗರದಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರು ನಗರಾಭಿವೃದ್ದಿ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಿ ಯೋಜನೆಗೆ ಚಾಲನೆ ನೀಡಿದರು.
‘ಪ್ರತಿ ತಿಂಗಳು ₹1500 ಅನ್ನು ಅನ್ನಪೂರ್ಣ ಯೋಜನೆಯಡಿ ಸ್ವಚ್ಛತಾ ಕಾರ್ಮಿಕರು ಪಡೆಯಲಿದ್ದಾರೆ. ಆ್ಯಕ್ಸಿಸ್ ಬ್ಯಾಂಕ್ ಜೊತೆಗೂಡಿ ಯೋಜನೆ ಜಾರಿಗೊಳಿಸಲಾಗಿದೆ. ಕರ್ನಾಟಕದ ಇತರೆ ನಗರಗಳಲ್ಲಿ ಸ್ವಚ್ಛತಾ ಕಾರ್ಮಿಕರಿಗೆ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಲಾಗಿದೆ. ಆದರೆ, ಉಪಾಹಾರದ ಬದಲು ತಮಗೆ ಇಷ್ಟವಾದ ಆಹಾರ ಸೇವಿಸಲಿ ಎನ್ನುವ ಉದ್ದೇಶದಿಂದ ನೇರವಾಗಿ ಹಣ ನೀಡಲಾಗುತ್ತಿದೆ’ ಎಂದು ಡಿ.ಕೆ. ಶಿವಕುಮಾರ್ ವಿವರಿಸಿದರು.
‘ನಮ್ಮ ನಗರವನ್ನು ಸ್ವಚ್ಛವಾಗಿ ಇಡಲು ಹಗಲು-ರಾತ್ರಿ ಕಾರ್ಮಿಕರು ಶ್ರಮಿಸುತ್ತಿದ್ದಾರೆ. ಈ ಯೋಜನೆಯ ಮೂಲಕ ನಾವು ಅವರ ಶ್ರಮವನ್ನು ಗೌರವಿಸುತ್ತಿದ್ದೇವೆ’ ಎಂದು ಹೇಳಿದರು.
ಈ ಯೋಜನೆಯು ನಗರದ ಒಳಚರಂಡಿ ಕಾರ್ಮಿಕರ ಮೇಲಿನ ದೃಷ್ಟಿಕೋನ ಬದಲಾಯಿಸುವ ನಿಟ್ಟಿನಲ್ಲಿ ಪ್ರಥಮ ಹೆಜ್ಜೆಯಾಗಿದೆ. ಜಲಮಂಡಳಿ ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಳ್ಳಲು ಚಿಂತನೆ ನಡೆಸುತ್ತಿದೆ ಎಂದು ಮಂಡಳಿ ಅಧ್ಯಕ್ಷ ಡಾ. ರಾಮಪ್ರಸಾತ್ ಮನೋಹರ್ ತಿಳಿಸಿದರು.
ಹೇಗಿರಲಿದೆ ಯೋಜನೆ
ಭಾರತದ ಇನ್ನಿತರ ನಗರಪಾಲಿಕೆಗಳಲ್ಲಿ ಸ್ವಚ್ಚತಾ ಕಾರ್ಮಿಕರಿಗೆ ಆಹಾರ ನೀಡುವ ವ್ಯವಸ್ಥೆಯಿದೆ. ಕೆಲವೆಡೇ ಸ್ವಯಂ ಸೇವಾ ಸಂಸ್ಥೆಗಳ ಜೊತೆ ಜೊತೆಗೂಡಿ ಕಾರ್ಮಿಕರಿಗಾಗಿ ಉಪಹಾರ ವ್ಯವಸ್ಥೆಯನ್ನು ಮಾಡಲಾಗಿದೆ. ಬೆಂಗಳೂರು ಜಲಮಂಡಳಿ ದೇಶದಲ್ಲೆ ಮೊದಲ ಬಾರಿಗೆ ತಂತ್ರಜ್ಞಾನ ಆಧರಿತ ಹಾಗೂ ಪ್ರತಿ ತಿಂಗಳೂ ನೇರವಾಗಿ ಕಾರ್ಮಿಕರಿಗೆ ಹಣ ವರ್ಗಾವಣೆ ಮಾಡುವ ಅನ್ನಪೂರ್ಣ ಯೋಜನೆ ಜಾರಿಗೊಳಿಸಿದೆ. "ಕೆಳ ಹಂತದಲ್ಲಿ ಕೆಲಸ ಮಾಡುವವರ ಆರೋಗ್ಯ ಪೌಷ್ಟಿಕತೆಗೆ ಆದ್ಯತೆ ನೀಡಲು ಈ ಯೋಜನೆ ಜಾರಿಗೊಳಿಸಲಾಗಿದೆ. ಅವರ ದಿನದ ಆರಂಭ ಆರೋಗ್ಯಪೂರ್ಣವಾಗಿರಲಿ ಎಂಬ ಆಶಯ ಹೊಂದಿದ್ದೇವೆ " ಎಂದು ಜಲಮಂಡಳಿ ಅಧ್ಯಕ್ಷ ಡಾ ರಾಮ್ ಪ್ರಸಾತ್ ಮನೋಹರ್ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.