ಬೆಂಗಳೂರು: ದೀರ್ಘ ಕಾಲದಿಂದ ನೀರಿನ ಶುಲ್ಕ ಬಾಕಿ ಉಳಿಸಿಕೊಂಡಿರುವ ಗ್ರಾಹಕರು ಬಡ್ಡಿ ಮತ್ತು ದಂಡ ರಹಿತವಾಗಿ ಹಿಂಬಾಕಿ ಪಾವತಿಗೆ ಅವಕಾಶ ಕಲ್ಪಿಸಲು ‘ಒಂದು ಬಾರಿ ಪರಿಹಾರ ಯೋಜನೆ’(ಒಟಿಎಸ್) ಜಾರಿಗೊಳಿಸಲು ಜಲಮಂಡಳಿ ಸಿದ್ಧತೆ ನಡೆಸಿದೆ. ಮೇ ತಿಂಗಳಿನಿಂದಲೇ ಇದು ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ.
‘ಜಲಮಂಡಳಿಯ ನಿರ್ವಹಣಾ ವೆಚ್ಚ ಏರಿಕೆಯಾಗುತ್ತಿದೆ. ಮತ್ತೊಂದೆಡೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಇಲಾಖೆಗಳು, ವಸತಿ ಮತ್ತು ವಾಣಿಜ್ಯ ಕಟ್ಟಡಗಳು ಸೇರಿ ಗ್ರಾಹಕರಿಂದ ₹ 701.70 ಕೋಟಿ ನೀರಿನ ಬಿಲ್ ಬಾಕಿ ಇದೆ. ಬಾಕಿ ಬಿಲ್ ಸಂಗ್ರಹಿಸಲು ಒಟಿಎಸ್ ವ್ಯವಸ್ಥೆ ಜಾರಿಗೆ ಮಂಡಳಿ ಮುಂದಾಗಿದೆ. ಸರ್ಕಾರದಿಂದ ಅನುಮತಿ ದೊರೆತರೆ ಮೇ ತಿಂಗಳಿನಿಂದಲೇ ಜಾರಿಗೊಳಿಸುವ ಸಾಧ್ಯತೆ ಇದೆ. ಯೋಜನೆ ಜಾರಿಯಾದಾಗಿನಿಂದ ಮೂರು ತಿಂಗಳವರೆಗೆ ಈ ಯೋಜನೆಯನ್ನು ಮುಂದವರಿಸಲಾಗುತ್ತದೆ’ ಎಂದು ಜಲಮಂಡಳಿ ಮೂಲಗಳು ತಿಳಿಸಿವೆ.
ಒಳಚರಂಡಿ ಮತ್ತು ನೀರು ಸರಬರಾಜು ಶುಲ್ಕ ಜಲಮಂಡಳಿಗೆ ಪ್ರಮುಖ ಆದಾಯದ ಮೂಲವಾಗಿದೆ. ಹೀಗಾಗಿ ಬಾಕಿ ಶುಲ್ಕ ಸಂಗ್ರಹಣೆಗೆ ಒಟಿಎಸ್ ಜಾರಿಗೊಳಿಸಲು ಜಲಮಂಡಳಿ ಉದ್ದೇಶಿಸಿದೆ. ಈ ಯೋಜನೆ ಜಾರಿಯಾದರೆ ಗ್ರಾಹಕರು ಈವರೆಗೆ ಬಾಕಿ ಉಳಿಸಿಕೊಂಡಿರುವ ಶುಲ್ಕಕ್ಕೆ ಹಾಕಿರುವ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ. ಜಲಮಂಡಳಿಯ ನಿಯಮಗಳ ಉಲ್ಲಂಘನೆಗಾಗಿ ವಿಧಿಸಿದ್ದ ದಂಡವನ್ನು ಮನ್ನಾ ಮಾಡಿ, ಬಾಕಿ ಶುಲ್ಕವನ್ನಷ್ಟೇ ಸಂಗ್ರಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದಲ್ಲಿ 11.2 ಲಕ್ಷ ನೀರಿನ ಸಂಪರ್ಕಗಳಿವೆ. ಇದರಲ್ಲಿ 2 ಲಕ್ಷದಷ್ಟು ಸರ್ಕಾರಿ ಇಲಾಖೆಗಳು, ಕೈಗಾರಿಕೆ, ವಾಣಿಜ್ಯ ಕಟ್ಟಡಗಳು, 9 ಲಕ್ಷ ಮನೆಗಳಿವೆ. ಪ್ರತಿ ತಿಂಗಳು ₹119 ಕೋಟಿ ಆದಾಯ ಸಂಗ್ರಹವಾದರೂ, ತಿಂಗಳಿಗೆ ₹170 ಕೋಟಿ ವೆಚ್ಚವಾಗುತ್ತದೆ. ಪ್ರತಿ ತಿಂಗಳು ₹51 ಕೋಟಿ ನಷ್ಟವಾಗುತ್ತಿದೆ ಎನ್ನುತ್ತಾರೆ ಮಂಡಳಿಯ ಅಧಿಕಾರಿಗಳು.
ಇತ್ತೀಚೆಗಷ್ಟೇ ಬಿಬಿಎಂಪಿ ಅಧೀನದಲ್ಲಿದ್ದ1,145 ಶುದ್ಧ ನೀರಿನ ಘಟಕಗಳು ಮತ್ತು ಸುಮಾರು 4,000ಕ್ಕೂ ಹೆಚ್ಚು ಕೊಳವೆ ಬಾವಿಗಳ ನಿರ್ವಹಣೆಯೂ ಜಲಮಂಡಳಿಯ ಹೆಗಲೇರಿದೆ. ಇದರಿಂದ ನಿರ್ವಹಣಾ ವೆಚ್ಚ ಮತ್ತಷ್ಟು ಹೆಚ್ಚಾಗುತ್ತಿದೆ.
ಬಾಕಿ ಶುಲ್ಕ ಸಂಗ್ರಹಕ್ಕಾಗಿ ಒಟಿಎಸ್ ವ್ಯವಸ್ಥೆ ಜಾರಿಗೆ ತರಲು ಉದ್ದೇಶಿಸಲಾಗಿದೆ. ಸರ್ಕಾರದ ಅನುಮತಿ ದೊರೆತರೆ ಮೇ ತಿಂಗಳಿನಿಂದ ಜಾರಿಗೊಳಿಸುತ್ತೇವೆ.ರಾಮ್‌ಪ್ರಸಾತ್ ಮನೋಹರ್, ಅಧ್ಯಕ್ಷ, ಜಲಮಂಡಳಿ
ಸದ್ಯ ಜಲಮಂಡಳಿ ತಿಂಗಳಿಗೆ ₹59 ಕೋಟಿ ವಿದ್ಯುತ್ ಬಿಲ್ ಪಾವತಿಸುತ್ತಿದೆ. ಒಂದೊಮ್ಮೆ ಕಾವೇರಿ 5ನೇ ಹಂತದ ಯೋಜನೆ ಪೂರ್ಣ ಅನುಷ್ಠಾನಗೊಂಡರೆ ಈ ಬಿಲ್ ಮೊತ್ತ ₹ 86 ಕೋಟಿ ದಾಟಬಹುದು. ಇದರಿಂದ ತಿಂಗಳ ನಿರ್ವಹಣಾ ವೆಚ್ಚ₹170 ಕೋಟಿಯಿಂದ ₹210 ಕೋಟಿ ಮೀರಲಿದೆ. ನೀರಿನ ಬಿಲ್ ವಸೂಲಿಯಾಗದ ಕಾರಣ, ಜಲಮಂಡಳಿ ₹566 ಕೋಟಿಗೂ ಹೆಚ್ಚು ವಿದ್ಯುತ್ ಶುಲ್ಕವನ್ನು ಬಾಕಿ ಉಳಿಸಿಕೊಂಡಿದೆ. ಇದೆಲ್ಲವನ್ನೂ ನಿಭಾಯಿಸಲು ಒಟಿಎಸ್ ಮೂಲಕ ಬಾಕಿ ಶುಲ್ಕ ಸಂಗ್ರಹಕ್ಕೆ ಜಲಮಂಡಳಿ ಮುಂದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.