ADVERTISEMENT

ಬೆಂಗಳೂರು ಜಲಮಂಡಳಿಗೆ ₹650 ಕೋಟಿ ಬಾಕಿ ಭಾರ

ಸ್ನೇಹಾ ರಮೇಶ್
Published 29 ಜುಲೈ 2024, 0:00 IST
Last Updated 29 ಜುಲೈ 2024, 0:00 IST
<div class="paragraphs"><p>ಬಿಡಬ್ಲ್ಯುಎಸ್‌ಎಸ್‌ಬಿ</p></div>

ಬಿಡಬ್ಲ್ಯುಎಸ್‌ಎಸ್‌ಬಿ

   

ಬೆಂಗಳೂರು: ತನ್ನ ಹೊಸ ಯೋಜನೆಗಳಿಗೆ ಅನುದಾನ ಒದಗಿಸಲು ಸಾಧ್ಯವಾಗದೇ ಇಕ್ಕಟ್ಟಿಗೆ ಸಿಲುಕಿರುವ ಬೆಂಗಳೂರು ಜಲಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ), ವಿವಿಧ ವರ್ಗದ ಗ್ರಾಹಕರು ಉಳಿಸಿಕೊಂಡಿರುವ ₹650 ಕೋಟಿಗಳಷ್ಟು ಹಿಂಬಾಕಿ ವಸೂಲಿಗೆ ಹರಸಾಹಸಪಡುತ್ತಿದೆ.

ಗೃಹ ಬಳಕೆ ಗ್ರಾಹಕರು, ವಾಣಿಜ್ಯ ಬಳಕೆ ಗ್ರಾಹಕರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸಂಸ್ಥೆಗಳಿಂದ ಒಟ್ಟು ₹ 649.66 ಕೋಟಿಯಷ್ಟು ಶುಲ್ಕವು ದೀರ್ಘ ಕಾಲದಿಂದ ವಸೂಲಿಯಾಗದೇ ಉಳಿದಿದೆ ಎಂಬ ಮಾಹಿತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ADVERTISEMENT

ಮಂಡಳಿಯ ತಿಂಗಳ ವರಮಾನ ₹ 130 ಕೋಟಿಯಿಂದ ₹ 150 ಕೋಟಿಗಳಷ್ಟಿದೆ. ಗ್ರಾಹಕರು ಹಿಂಬಾಕಿ ಉಳಿಸಿಕೊಂಡಿರುವ ಮೊತ್ತವು ಮಂಡಳಿಯ ಐದು ತಿಂಗಳ ವರಮಾನಕ್ಕಿಂತಲೂ ಹೆಚ್ಚಾಗಿದೆ.

ಗ್ರಾಹಕರಿಂದ ಸಂಗ್ರಹಿಸುವ ನೀರಿನ ಶುಲ್ಕದಲ್ಲೇ ಜಲಮಂಡಳಿಯ ದೈನಂದಿನ ಕೆಲಸಗಳ ನಿರ್ವಹಣೆ ಆಗುತ್ತಿದೆ. ನೀರಿನ ದರ ಏರಿಕೆ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡುತ್ತಿಲ್ಲ. ಈಗ ಗ್ರಾಹಕರು ಉಳಿಸಿಕೊಂಡಿರುವ ಹಿಂಬಾಕಿ ಜಲಮಂಡಳಿ ಪಾಲಿಗೆ ಭಾರವಾಗಿ ಪರಿಣಮಿಸಿದೆ ಎನ್ನುತ್ತಾರೆ ಮಂಡಳಿಯ ಅಧಿಕಾರಿಗಳು.

‘ಈಗ ಜಲಮಂಡಳಿಯು ಗ್ರಾಹಕರಿಂದ ಸಂಗ್ರಹಿಸುವ ಶುಲ್ಕದ ಮೇಲೆ ಅವಲಂಬಿತವಾಗಿದೆ. ನೀರಿನ ದರ ಏರಿಕೆಗೆ ಅವಕಾಶ ಸಿಗದೇ ಇರುವುದರಿಂದ ವರಮಾನ ಸಂಗ್ರಹದಲ್ಲಿ ಸುಧಾರಣೆ ತರುವತ್ತ ನಾವು ಗಮನಹರಿಸಲೇಬೇಕಾಗಿದೆ. ನೀರು ಮೂಲ ಅಗತ್ಯಗಳಲ್ಲಿ ಒಂದಾಗಿರುವುದರಿಂದ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ನೀರು ಪೂರೈಕೆ ಸಂಪರ್ಕ ಕಡಿತ ಮಾಡುವುದು ಕಷ್ಟ’ ಎನ್ನುತ್ತಾರೆ ಬಿಡಬ್ಲ್ಯುಎಸ್‌ಎಸ್‌ಬಿಯ ಹಿರಿಯ ಅಧಿಕಾರಿಯೊಬ್ಬರು.

ಮೂಲಗಳ ಪ್ರಕಾರ, ಹಲವು ಪ್ರಭಾವಿ ವ್ಯಕ್ತಿಗಳು ದೊಡ್ಡ ಮೊತ್ತದ ನೀರಿನ ಶುಲ್ಕವನ್ನು ಬಾಕಿ ಉಳಿಸಿಕೊಂಡಿದ್ದಾರೆ. ಪ್ರಭಾವಿಗಳು ಹೊಂದಿರುವ ಸ್ಥಾನಮಾನ ಮತ್ತು ಅಧಿಕಾರದ ಕಾರಣದಿಂದಾಗಿ ಅವರಿಂದ ಹಿಂಬಾಕಿ ವಸೂಲಿ ಮಾಡುವುದು ಜಲಮಂಡಳಿಗೆ ಕಷ್ಟವಾಗುತ್ತಿದೆ.

ಒಂದೆಡೆ ಪ್ರಭಾವಿಗಳಿಂದ ನೀರಿನ ಕರದ ಬಾಕಿ ವಸೂಲಿ ಮಾಡುವುದು ಕಷ್ಟವಾಗಿದ್ದರೆ, ಮತ್ತೊಂದೆಡೆ ಸರ್ಕಾರದ ವಿವಿಧ ಸಂಸ್ಥೆಗಳು ಉಳಿಸಿಕೊಂಡಿರುವ ಬಾಕಿ ವಸೂಲಿಯೂ ಜಲಮಂಡಳಿ ಪಾಲಿಗೆ ದುಸ್ತರವಾಗಿದೆ.

‘ಇಂದಿರಾ ಕ್ಯಾಂಟೀನ್‌ಗಳು, ಹಲವು ಸರ್ಕಾರಿ ಆಸ್ಪತ್ರೆಗಳು, ರಕ್ಷಣಾ ಇಲಾಖೆಯ ಸಂಸ್ಥೆಗಳು ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಸಂಸ್ಥೆಗಳು ಜಲಮಂಡಳಿಗೆ ಶುಲ್ಕ ‍ಪಾವತಿ ಬಾಕಿ ಉಳಿಸಿಕೊಂಡಿವೆ. ಹಲವು ಬಾರಿ ನೋಟಿಸ್‌ ನೀಡಿದ್ದರೂ ಸ್ಪಂದಿಸಿಲ್ಲ. ಸರ್ಕಾರಿ ಸಂಸ್ಥೆಗಳಿಗೆ ನೀರು ಪೂರೈಕೆ ಕಡಿತ ಮಾಡಿದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಬಾಕಿ ವಸೂಲಿ ಕಷ್ಟವಾಗಿದೆ’ ಎನ್ನುತ್ತಾರೆ ಜಲಮಂಡಳಿಯ ಮತ್ತೊಬ್ಬ ಅಧಿಕಾರಿ.

‘ವಿಶೇಷ ಅಭಿಯಾನಕ್ಕೆ ನಿರ್ಧಾರ’

‘ಬಾಕಿ ಇರುವ ನೀರಿನ ಕರ ವಸೂಲಿ ಕುರಿತು ರಾಜ್ಯ ಸರ್ಕಾರದ ಜತೆ ಚರ್ಚಿಸಲು ಜಲಮಂಡಳಿ ನಿರ್ಧರಿಸಿದೆ. ಹಳೆಯ ಬಾಕಿ ವಸೂಲಿಗೆ ವಿಶೇಷ ಅಭಿಯಾನವೊಂದನ್ನು ಆರಂಭಿಸುವುದಕ್ಕೂ ನಿರ್ಧರಿಸಲಾಗಿದೆ’ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ವಿ. ರಾಮ್‌ಪ್ರಸಾತ್‌ ಮನೋಹರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ವಿವಿಧ ಇಲಾಖೆಗಳೊಂದಿಗೆ ಮಂಡಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಸಭೆ ನಡೆಸಲು ಸಮಯ ನಿಗದಿಪಡಿಸುವಂತೆ ಕೋರಲಾಗಿದೆ. ಈ ಬಾಕಿಗಳೆಲ್ಲವೂ ತುಂಬಾ ಹಳೆಯವು. ವಸೂಲಿ ವಿಳಂಬವಾಗುತ್ತದೆ. ವಸೂಲಿ ಪ್ರಕ್ರಿಯೆಗೆ ವೇಗ ನೀಡಲು ವಿಶೇಷ ಅಭಿಯಾನ ನಡೆಸಲಾಗುವುದು’ ಎಂದರು.

ಬಾಕಿ ಮೊತ್ತದ ವಿವರ

ಗ್ರಾಹಕ ವರ್ಗ;ಬಾಕಿ ಮೊತ್ತ (ಮೇ 2024ರವರೆಗೆ)

ಗೃಹಬಳಕೆ; ₹288.75 ಕೋಟಿ

ವಾಣಿಜ್ಯ; ₹184.5

ಸರ್ಕಾರಿ ಸಂಸ್ಥೆಗಳು; ₹176.41

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.