ADVERTISEMENT

ಪೊಲೀಸರು ಅನುಮತಿ ಹಿಂತೆಗೆದುಕೊಂಡರೂ ಪ್ರಜಾಧಿಕಾರ ಹೋರಾಟ ಸಮಿತಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 10:04 IST
Last Updated 6 ಫೆಬ್ರುವರಿ 2020, 10:04 IST
   

ಬೆಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ ರದ್ದುಗೊಳಿಸಬೇಕೆಂದು ಆಗ್ರಹಿಸಿ ಸ್ವಾತಂತ್ರ್ಯ ಹೋರಾಟಗಾರ ಎಚ್. ಎಸ್. ದೊರೆಸ್ವಾಮಿ ನೇತೃತ್ವದಲ್ಲಿ ಪ್ರಜಾಧಿಕಾರ ಹೋರಾಟ ಸಮಿತಿ ವತಿಯಿಂದ ಪುರಭವನ ಮುಂಭಾಗದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ನಡೆಸಲು ಬುಧವಾರ ಅನುಮತಿ ನೀಡಿದ್ದ ಪೊಲೀಸರು, ಗುರುವಾರ ಬೆಳಿಗ್ಗೆ ಅದನ್ನು ಹಿಂತೆಗೆದುಕೊಂಡಿದ್ದಾರೆ. ಹೀಗಾಗಿ, ಪುರಭವನ ಮುಂಭಾಗದಲ್ಲಿ ಪೆಂಡಾಲ್ ಹಾಕಲು ಅವಕಾಶ ನೀಡಲಿಲ್ಲ. ಅನುಮತಿ ರದ್ದುಪಡಿಸಿರುವುದರಿಂದ ಪ್ರತಿಭಟನೆ ಹಿಂತೆಗೆದುಕೊಳ್ಳಬೇಕೆಂದು ಎಸ್.ಜೆ. ಪಾರ್ಕ್ ಠಾಣೆಯ ಇನ್ಸ್‌ಪೆಕ್ಟರ್‌ಮನವಿ ಮಾಡಿದರು.

ಆದರೆ, ಅದಕ್ಕೆ ಪ್ರತಿಭಟನಕಾರರು ಒಪ್ಪಲಿಲ್ಲ. ಅಲ್ಲದೆ, ಪುರಭವನದ ಮೆಟ್ಟಿಲಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಸರ್ಕಾರಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

'ಪ್ರತಿಭಟನೆಗೆ ಮೊದಲು ಅನುಮತಿ ನೀಡಿದ್ದ ಪೊಲೀಸರು, ಏಕಾಏಕಿ ಹಿಂತೆಗೆದುಕೊಳ್ಳಲು ಕಾರಣವೇನೆಂದು ತಿಳಿಸಿಲ್ಲ' ಎಂದು ಪ್ರಜಾಧಿಕಾರ ಹೋರಾಟ ಸಮಿತಿಯ ಸಂಚಾಲಕ ಅಲಿ ಬಾಬಾ ತಿಳಿಸಿದರು.

ದಲಿತ ಸಂಘರ್ಷ ಸಮಿತಿ, ಸಮಾಜವಾದಿ ಆಧ್ಯಯನ ಕೇಂದ್ರ ಮತ್ತಿತರ ಸಂಘಟನೆಗಳು ಪ್ರತಿಭಟನೆಗೆ ಕೈಜೋಡಿಸಿವೆ. ಹೋರಾಟಗಾರರಾದ ಮೈಕಲ್ ಫರ್ನಾಂಡಿಸ್, ರವಿಕೃಷ್ಣ ರೆಡ್ಡಿ ಪ್ರತಿಭಟನೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.