ADVERTISEMENT

ಕ್ಯಾಬ್‌ ಚಾಲಕರ ಅಹವಾಲು ಆಲಿಸಿದ ಆಯುಕ್ತ

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 19:28 IST
Last Updated 25 ಜೂನ್ 2018, 19:28 IST

ಬೆಂಗಳೂರು: ಓಲಾ, ಉಬರ್‌ ಸೇರಿದಂತೆ ಕ್ಯಾಬ್‌ ಚಾಲಕರ ಅಹವಾಲುಗಳನ್ನು ಕೇಳುವ ಉದ್ದೇಶದಿಂದ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ನಿರ್ದೇಶನದ ಮೇರೆಗೆ ಸಾರಿಗೆ ಆಯುಕ್ತ ನವೀನ್‌ ರಾಜ್‌ ಸಿಂಗ್‌ ನೇತೃತ್ವದಲ್ಲಿ ಸೋಮವಾರ ಸಭೆ ನಡೆಯಿತು.

ಸಭೆಯಲ್ಲಿ ಕ್ಯಾಬ್‌ ಚಾಲಕರು, ಶುಲ್ಕ ವ್ಯವಸ್ಥೆ ಪರಿಶೀಲಿಸುವಂತೆ ಒತ್ತಾಯ ಮಾಡಿದರು. ಅಲ್ಲದೇ ಖಾಸಗಿ ಚಾಲನಾ ಪರವಾನಗಿ ಹೊಂದಿರುವ ಚಾಲಕರಿಗೆ ಕೆಲಸ ಕೊಡುತ್ತಿರುವ ಓಲಾ ಕಂಪನಿಯ ನೀತಿಯನ್ನು ತಡೆಯುವ ಮೂಲಕ ಭದ್ರತೆ ನೀಡಬೇಕು ಎಂದು ಮನವಿ ಮಾಡಿದರು.

‘ಅತ್ಯಾಚಾರ ಪ್ರಕರಣಗಳಲ್ಲಿ ಚಾಲಕರಿಗೆ ಶಿಕ್ಷೆಯಾಗಿದೆ. ಆದರೆ, ಆ್ಯಪ್‌ ಮೂಲಕ ಕ್ಯಾಬ್‌ ನೀಡಿದ ನಿರ್ವಾಹಕರ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ’ ಎಂಬ ದೂರುಗಳು ಕೂಡ ಕೇಳಿಬಂದಿವೆ.

ADVERTISEMENT

‘ಮಾರ್ಚ್‌ ತಿಂಗಳಿನಲ್ಲಿ ನಿಗದಿಯಾದ ಕ್ಯಾಬ್‌ ಶುಲ್ಕವನ್ನು ಪರಿಷ್ಕರಿಸಬೇಕು. ಕನಿಷ್ಠ ಹಾಗೂ ಗರಿಷ್ಠ ಶುಲ್ಕದ ನಡುವೆ ದೊಡ್ಡ ವ್ಯತ್ಯಾಸ ಇದೆ. ಈಗ ಇರುವ ಶುಲ್ಕ ಕೇವಲ ನಿರ್ವಾಹಕರಿಗೆ ಲಾಭ ತರುತ್ತಿದೆ. ಕ್ಯಾಬ್‌ ಚಾಲಕರು ಹಾಗೂ ಪ್ರಯಾಣಿಕರಿಗೆ ಇದರಿಂದ ಅನ್ಯಾಯವಾಗಿದೆ’ ಎಂದು ಚಾಲಕರ ಸಂಘದ ಮುಖ್ಯಸ್ಥ ತನ್ವೀರ್ ಪಾಷಾ ಹೇಳಿದರು.

ಸಮಸ್ಯೆಗಳ ಕುರಿತು ಚರ್ಚೆ ನಡೆಸಿ ಪರಿಶೀಲಿಸುವ ಬಗ್ಗೆ ಸಾರಿಗೆ ಆಯುಕ್ತರು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.