ADVERTISEMENT

ಸಂಪುಟ ರಚನೆ ವಿಳಂಬಕ್ಕೆ ವ್ಯಂಗ್ಯ: ಬಿಎಸ್‌ವೈ ಕಾಲೆಳೆದ ಕಾಂಗ್ರೆಸ್, ಜೆಡಿಎಸ್‌

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 19:40 IST
Last Updated 2 ಆಗಸ್ಟ್ 2019, 19:40 IST
ಬಿ.ಎಸ್.ಯಡಿಯೂರಪ್ಪ
ಬಿ.ಎಸ್.ಯಡಿಯೂರಪ್ಪ   

ಬೆಂಗಳೂರು: ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ವಹಿಸಿಕೊಂಡು ಒಂದು ವಾರ ಕಳೆದಿದ್ದರೂ ಸಚಿವ ಸಂಪುಟ ರಚನೆಯಾಗದಿರುವುದಕ್ಕೆ ಕಾಂಗ್ರೆಸ್ ಹಾಗೂ ಜೆಡಿಎಸ್ ಟ್ವೀಟ್ ಮೂಲಕ ವ್ಯಂಗ್ಯವಾಡಿವೆ.

‘ಹಿಂಬಾಗಿಲು ಮೂಲಕ ಬಂದ ಯಡಿಯೂರಪ್ಪ ಅವರೇ ನಿಮ್ಮ ಸಚಿವ ಸಂಪುಟ ಎಲ್ಲಿ. ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಅಧಿಕಾರ ಹಂಚಿಕೆಯ ಕಿತ್ತಾಟಕ್ಕೆ ರಾಜ್ಯದ ಜನತೆಗೆ ಏಕೆ ತೊಂದರೆ ಕೊಡುತ್ತಿದ್ದೀರಿ’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ಆಡಳಿತ ಯಂತ್ರವನ್ನು ಇನ್ನೆಷ್ಟು ದಿನ ಸ್ಥಗಿತಗೊಳಿಸುವಿರಿ. ಅಭಿವೃದ್ಧಿ ಕೆಲಸಗಳಿಗಾಗಿ ರಾಜ್ಯದ ಜನತೆ ಮತ್ತೆಷ್ಟು ದಿನ ಕಾಯಬೇಕು’ ಎಂದು ಕೇಳಿದೆ.

ADVERTISEMENT

ಜೆಡಿಎಸ್: ರಾಜ್ಯದಾದ್ಯಂತ ಬರ ಕಾಡುತ್ತಿದ್ದು, ಕೆಲವೆಡೆ ನೆರೆ ಬಂದಿದೆ. ಒಂದು ವಾರ ಕಳೆದರೂ ಸಚಿವ ಸಂಪುಟ ರಚಿಸದೆ ಕಾಲಹರಣ ಮಾಡುವ ಮೂಲಕ ಆಡಳಿತ ಯಂತ್ರವನ್ನೇ ಸ್ಥಗಿತಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದಾರೆ ಎಂದು ಜೆಡಿಎಸ್ ಆರೋಪಿಸಿದೆ.

ವೀಕ್ಷಕರ ನೇಮಕ: ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಉಪಚುನಾವಣೆಗೆ ಪಕ್ಷ ಸಂಘಟಿಸಲು ವೀಕ್ಷಕರನ್ನು ನೇಮಕ ಮಾಡಲಾಗಿದೆ. ವೀಕ್ಷಕರು ಕ್ಷೇತ್ರಗಳಿಗೆ ಭೇಟಿನೀಡಿ ಕಾರ್ಯಕರ್ತರ ಜತೆಗೆ ಚರ್ಚಿಸಿದ ನಂತರ ವರದಿ ನೀಡಲಿದ್ದಾರೆ. ಈ ವರದಿ ಆಧಾರದ ಮೇಲೆ ಪಕ್ಷ ಸಂಘಟನೆ, ಅಭ್ಯರ್ಥಿಗಳ ಆಯ್ಕೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಪ್ರತಿ ಕ್ಷೇತ್ರಕ್ಕೆ ಮೂವರನ್ನು ನೇಮಕ ಮಾಡಿದ್ದು, ಸಮಿತಿ ನೇತೃತ್ವ ವಹಿಸಿದವರ ವಿವರ ಹೀಗಿದೆ.

ಅಥಣಿ– ಎಂ.ಬಿ.ಪಾಟೀಲ, ಕಾಗವಾಡ– ಸತೀಶ್ ಜಾರಕಿಹೊಳಿ, ಗೋಕಾಕ್– ಶಿವಾನಂದ ಪಾಟೀಲ, ಮಸ್ಕಿ– ಈಶ್ವರ್ ಖಂಡ್ರೆ, ಯಲ್ಲಾಪುರ– ಆರ್.ವಿ.ದೇಶಪಾಂಡೆ, ಹಿರೇಕೆರೂರು– ಎಚ್.ಕೆ.ಪಾಟೀಲ, ರಾಣೆಬೆನ್ನೂರು– ಜಮೀರ್ ಅಹಮದ್ ಖಾನ್, ವಿಜಯನಗರ– ಬಸವರಾಜ ರಾಯರಡ್ಡಿ, ಚಿಕ್ಕಬಳ್ಳಾಪುರ– ಶಿವಶಂಕರರೆಡ್ಡಿ, ಕೆ.ಆರ್.ಪುರ– ಕೆ.ಜೆ.ಜಾರ್ಜ್, ಯಶವಂತಪುರ– ಎಂ.ಕೃಷ್ಣಪ್ಪ, ರಾಜರಾಜೇಶ್ವರಿ ನಗರ– ಡಿ.ಕೆ.ಸುರೇಶ್, ಹೊಸಕೋಟೆ– ಕೃಷ್ಣ ಬೈರೇಗೌಡ, ಶಿವಾಜಿನಗರ– ಯು.ಟಿ.ಖಾದರ್, ಮಹಾಲಕ್ಷ್ಮಿ ಲೇಔಟ್– ಜಿ.ಪರಮೇಶ್ವರ, ಕೆ.ಆರ್.ಪೇಟೆ– ಚಲುವರಾಯಸ್ವಾಮಿ, ಹುಣಸೂರು– ಎಚ್.ಸಿ.ಮಹದೇವಪ್ಪ.

‘ಎಲ್ಲರನ್ನೂ ಸೇರಿಸಿಕೊಳ್ಳಲಿ’
‘ಬಿಜೆಪಿಯವರು ಕಾಂಗ್ರೆಸ್‌ನ ಎಷ್ಟು ಶಾಸಕರನ್ನಾದರೂ ಸೇರಿಸಿಕೊಳ್ಳಲಿ. ಎಲ್ಲರನ್ನೂ ಸೆಳೆದುಕೊಳ್ಳಲಿ. ಇನ್ನೇನು ಉಳಿದಿದೆ’ ಎಂದು ಶಾಸಕ ಡಿ.ಕೆ.ಶಿವಕುಮಾರ್ ಕಿಡಿಕಾರಿದರು.

‘ನಾನು ಯಾವ ಅಧಿಕಾರದ ಆಕಾಂಕ್ಷಿಯೂ ಅಲ್ಲ. ಕೆಪಿಸಿಸಿ ಅಧ್ಯಕ್ಷ, ಶಾಸಕಾಂಗ ಪಕ್ಷದ ನಾಯಕನ ಸ್ಥಾನವೂ ಖಾಲಿ ಇಲ್ಲ. ಪಕ್ಷ ತೊರೆದು ಹೋಗಿರುವ ಮುನಿರತ್ನ ಅವರನ್ನೂ ಭೇಟಿಯಾಗಿಲ್ಲ. ಅವರು ಎಲ್ಲಿದ್ದಾರೆ, ಯಾವ ಪಕ್ಷದಲ್ಲಿ ಇದ್ದಾರೆ ಎಂಬುದೂ ಗೊತ್ತಿಲ್ಲ’ ಎಂದು ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.