ADVERTISEMENT

ವಂಚನೆಗೆ ಕಾಲ್ ಸೆಂಟರ್‌: 11 ಮಂದಿ ಸೆರೆ

​ಪ್ರಜಾವಾಣಿ ವಾರ್ತೆ
Published 9 ಜುಲೈ 2022, 5:17 IST
Last Updated 9 ಜುಲೈ 2022, 5:17 IST
ಕಾಲ್‌ ಸೆಂಟರ್ ಮೇಲೆ ದಾಳಿ ಮಾಡಿದ್ದ ಪೊಲೀಸರು, ಆರೋಪಿಗಳ ವೈಯಕ್ತಿಕ ವಿವರ ದಾಖಲಿಸಿಕೊಂಡರು
ಕಾಲ್‌ ಸೆಂಟರ್ ಮೇಲೆ ದಾಳಿ ಮಾಡಿದ್ದ ಪೊಲೀಸರು, ಆರೋಪಿಗಳ ವೈಯಕ್ತಿಕ ವಿವರ ದಾಖಲಿಸಿಕೊಂಡರು   

ಬೆಂಗಳೂರು: ಅಮೆರಿಕ ಸೇರಿದಂತೆ ವಿವಿಧ ದೇಶಗಳ ಪ್ರಜೆಗಳ ವೈಯಕ್ತಿಕ ವಿವರ ಸಂಗ್ರಹಿಸಿ ವಂಚಿಸಲೆಂದು ವ್ಯವ ಸ್ಥಿತ ಕಾಲ್‌ ಸೆಂಟರ್‌ ತೆರೆದಿದ್ದ 11 ಆರೋಪಿಗಳನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.

‘ಗುಜರಾತ್‌ನ ರಿಷಿವ್ಯಾಸ್ ಪ್ರತೀಕ್, ಪರೀಶ್, ಹೈತ್ ಪಟೇಲ್, ಕಿರಣ್, ಸೈಯ್ಯದ್ ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ. ಸೈಬರ್ ವಂಚನೆಗೆಂದೇ ಸ್ಥಾಪಿಸಿದ ಕಾಲ್‌ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿದ್ದ 75 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಗಿರೀಶ್ ಹೇಳಿದರು.

‘₹ 1 ಕೋಟಿ ಮೌಲ್ಯದ 132 ಕಂಪ್ಯೂಟರ್, ₹ 15 ಲಕ್ಷ ನಗದು, 4 ಲ್ಯಾಪ್‌ಟಾಪ್‌, 150 ಹೆಡ್ ಫೋನ್, 10 ಹಾರ್ಡ್ ಡಿಸ್ಕ್, ಆ್ಯಪಲ್ ಕಂಪನಿಯ 6 ಮೊಬೈಲ್, 3 ಕಾರು, 2 ಶಾಲಾ ವಾಹನ ಜಪ್ತಿ ಮಾಡಲಾಗಿದೆ’ ಎಂದೂ ತಿಳಿಸಿದರು.

ADVERTISEMENT

ಪ್ರತಿನಿಧಿಗಳ ಸೋಗಿನಲ್ಲಿ ವಂಚನೆ: ‘ಎಥಿಕಲ್ ಇನ್ಫೋ ಕಂಪನಿ ಸ್ಥಾಪಿಸಿದ್ದ ಪ್ರಮುಖ ಆರೋಪಿಗಳು, ಗಾಯತ್ರಿ ಟೆಕ್ ಪಾರ್ಕ್‌ನಲ್ಲಿ ಕಾಲ್‌ ಸೆಂಟರ್ ತೆರೆದಿದ್ದರು. ಕೆಲಸಕ್ಕೆಂದು ನೂರಾರು ಯುವಕ– ಯುವತಿಯರನ್ನು ನೇಮಿಸಿಕೊಂಡಿದ್ದರು’ ಎಂದು ಗಿರೀಶ್ ಹೇಳಿದರು.

‘ಅಮೆರಿಕ ಹಾಗೂ ವಿವಿಧ ದೇಶಗಳ ಪ್ರಜೆಗಳಿಗೆ ಕಾಲ್‌ ಸೆಂಟರ್‌ನಿಂದ ಕರೆ ಮಾಡುತ್ತಿದ್ದ ಆರೋಪಿಗಳು, ಬ್ಯಾಂಕ್ ಪ್ರತಿನಿಧಿಗಳೆಂದು ಪರಿಚಯಿಸಿಕೊಳ್ಳುತ್ತಿದ್ದರು. ಖಾತೆ ನವೀಕರಣ ಹಾಗೂ ಇತರೆ ಸೌಲಭ್ಯ ನೀಡುವುದಾಗಿ ಹೇಳಿ ವೈಯಕ್ತಿಕ ವಿವರ ಪಡೆಯುತ್ತಿದ್ದರು. ಅದನ್ನು ಬಳಸಿ ಕೊಂಡು, ಪ್ರಜೆಗಳ ಖಾತೆಯಿಂದ ಹಣ ಡ್ರಾ ಮಾಡಿಕೊಳ್ಳುತ್ತಿದ್ದರು’

‘ಹಣ ಕಡಿತವಾಗಿದ್ದರಿಂದ ಪ್ರಜೆ ಗಳು, ಆರೋಪಿಗಳಿಗೆ ಕರೆ ಮಾಡಿ ಪುನಃ ವಿಚಾರಿಸುತ್ತಿದ್ದರು. ಹಣ ವಾಪಸು ನೀಡುವ ಸೋಗಿನಲ್ಲೂ ಆರೋಪಿಗಳು, ಮತ್ತಷ್ಟು ಹಣ ಡ್ರಾ ಮಾಡಿಕೊಂಡು ವಂಚಿಸುತ್ತಿದ್ದರು’ ಎಂದೂ ತಿಳಿಸಿದರು.

ಎರಡು ವರ್ಷದಿಂದ ಕೃತ್ಯ: ‘ಆರೋಪಿಗಳು ಎರಡು ವರ್ಷ ಗಳಿಂದ ವಿದೇಶಿಗರನ್ನು ಮಾತ್ರ ವಂಚಿಸುತ್ತಿದ್ದರು. ಭಾರತೀಯರನ್ನು ವಂಚಿಸಿದರೆ, ಪೊಲೀಸರು ತಮ್ಮನ್ನು ಬಂಧಿಸಬಹುದೆಂದು ತಿಳಿದಿದ್ದರು’ ಎಂದು ಗಿರೀಶ್ ಹೇಳಿದರು.

‘ವಂಚನೆಯಿಂದ ಬಂದ ಹಣವನ್ನು ಆರೋಪಿಗಳು, ವಿದೇಶದಲ್ಲಿರುವ ಬ್ಯಾಂಕ್‌ಗಳ ಖಾತೆಗೆ ವರ್ಗಾಯಿಸುತ್ತಿದ್ದರು. ಅದೇ ಹಣವನ್ನು ಹವಾಲಾ ಮೂಲಕ ಭಾರತಕ್ಕೆ ತರಿಸಿಕೊಂಡು, ಕೆಲಸಗಾರರಿಗೆ ವೇತನ ನೀಡುತ್ತಿದ್ದರು. ಐಷಾರಾಮಿ ಜೀವನ ನಡೆಸುತ್ತಿದ್ದರು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.