ADVERTISEMENT

ಭೂಸುಧಾರಣೆ ಕಾಯ್ದೆ ತಿದ್ದುಪಡಿ ವಿರುದ್ಧ ರಾಜ್ಯವ್ಯಾಪಿ ಆಂದೋಲನ

ಹಳ್ಳಿ–ಹೊಲದಲ್ಲೆಲ್ಲ ‘ನಮ್ಮೂರ ಭೂಮಿ ನಮಗಿರಲಿ;ಅನ್ಯರಿಗಲ್ಲ’ ಕೂಗು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2020, 22:02 IST
Last Updated 8 ಆಗಸ್ಟ್ 2020, 22:02 IST
‘ನಮ್ಮೂರ ಭೂಮಿ ನಮಗಿರಲಿ;ಅನ್ಯರಿಗಲ್ಲ ಆಂದೋಲನ’ದ ಭಾಗವಾಗಿ ಹುನಗುಂದ ತಾಲ್ಲೂಕಿನ ಕೂಲಿಕಾರ್ಮಿಕರು ತಾವು ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಭಿತ್ತಿಪತ್ರ ಪ್ರದರ್ಶಿಸಿದರು
‘ನಮ್ಮೂರ ಭೂಮಿ ನಮಗಿರಲಿ;ಅನ್ಯರಿಗಲ್ಲ ಆಂದೋಲನ’ದ ಭಾಗವಾಗಿ ಹುನಗುಂದ ತಾಲ್ಲೂಕಿನ ಕೂಲಿಕಾರ್ಮಿಕರು ತಾವು ಕೆಲಸ ಮಾಡುತ್ತಿದ್ದ ಸ್ಥಳದಲ್ಲೇ ಭಿತ್ತಿಪತ್ರ ಪ್ರದರ್ಶಿಸಿದರು   

ಬೆಂಗಳೂರು: ಭೂಸುಧಾರಣಾ ಕಾಯ್ದೆಗೆ ರಾಜ್ಯ ಸರ್ಕಾರ ತಂದಿರುವ ತಿದ್ದುಪಡಿಯನ್ನು ಕೂಡಲೇ ವಾಪಸ್ ಪಡೆಯುವಂತೆ ಆಗ್ರಹಿಸಿ ‘ನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ ಆಂದೋಲನ’ ಶನಿವಾರ ಕರೆ ನೀಡಿದ್ದ ಚಳವಳಿಗೆ ರಾಜ್ಯದಾದ್ಯಂತ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ರೈತ ಸಂಘಟನೆಗಳನ್ನೂ ಒಳಗೊಂಡು ಎಲ್ಲ ಜನಾಂದೋಲನಗಳು ಚಳವಳಿಗೆ ಕೈಜೋಡಿಸಿವೆ. ರಾಜ್ಯದ ಎಲ್ಲ ಗ್ರಾಮಗಳಿಂದಲೂ ಪತ್ರ ಚಳವಳಿ ಆರಂಭಿಸಲಾಗಿದೆ. ಹಳ್ಳಿಯ ಪ್ರತಿ ಮನೆ ಮೇಲೆ ‘ನಮ್ಮೂರ ಭೂಮಿ ನಮಗಿರಲಿ; ಅನ್ಯರಿಗಲ್ಲ’ ಎಂಬ ಬರಹ ರಾರಾಜಿಸುತ್ತಿದೆ’ ಎಂದು ಆಂದೋಲನದ ವಿ.ಗಾಯತ್ರಿ ಮತ್ತುನವೀನ್ ಸಂಪತ್‍ಕೃಷ್ಣ ತಿಳಿಸಿದ್ದಾರೆ.‘

ಕ್ವಿಟ್ ಇಂಡಿಯಾ ಚಳವಳಿಯ ನೆನಪಿನಲ್ಲಿ ಶನಿವಾರ ವಿವಿಧೆಡೆ ನಡೆದ ಪ್ರತಿಭಟನೆಗಳಲ್ಲಿ ರೈತರು ತಮ್ಮ ಹೊಲಗಳಲ್ಲಿ ಫಲಕಗಳನ್ನು ನೆಡುವ ಮೂಲಕ ಭೂಮಿ ಮಾರಾಟಕ್ಕಿಲ್ಲ ಎಂದು ಘೋಷಿಸಿದರು. ಗ್ರಾಮಗಳಲ್ಲಿ ಮೆರವಣಿಗೆ ನಡೆಸಿ, ಸಾಮೂಹಿಕವಾಗಿ ಪತ್ರಗಳನ್ನು ಅಂಚೆ ಪೆಟ್ಟಿಗೆಗೆ ಹಾಕಿ, ಪೋಸ್ಟರ್ ಹಚ್ಚಿ, ಮನೆ ಬಾಗಿಲಿಗೆ ಸ್ಟಿಕರ್ ಅಂಟಿಸಿ ಚಳವಳಿಗೆ ಬೆಂಬಲ ನೀಡಿದರು. ಉದ್ಯೋಗ ಖಾತ್ರಿ ಯೋಜನೆ ಕೆಲಸಗಾರರು ಕೆಲಸದ ಸ್ಥಳದಲ್ಲೇ ಪ್ರತಿಭಟನೆ ನಡೆಸಿ, ತಮ್ಮನ್ನು ಶಾಶ್ವತ ಕೂಲಿಕಾರರಾಗಿ ಮಾಡದಂತೆ ಒತ್ತಾಯಿಸಿದರು.

ADVERTISEMENT

ಈ ಆಂದೋಲನ ನಿರಂತರವಾಗಿ ನಡೆಯಲಿದೆ. ಎಲ್ಲಾ ಗ್ರಾಮಗಳ ಪ್ರತಿ ಮನೆಯನ್ನೂ ತಲುಪುವ ಗುರಿ ಹೊಂದಿದೆ. ತಿದ್ದುಪಡಿಗಳನ್ನು ಹಿಂಪ ಡೆಯುವಂತೆ ಒತ್ತಾಯಿಸುವ ಜತೆಗೆ, ಜನರ ಆಶೋತ್ತರಗಳನ್ನು ಕಾಪಾಡುವ ಪರ್ಯಾಯ ಕಾಯ್ದೆ ರಚಿಸಬೇಕು ಎಂದು ಸರ್ಕಾರದ ಮೇಲೆ ಒತ್ತಡ ಹೇರುವುದು ಇದರ ಆಶಯವಾಗಿದೆ ಎಂದು ಗಾಯತ್ರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.