ADVERTISEMENT

ಜಿಯೊ ವಿರುದ್ಧ ಬೆಸ್ಕಾಂ ದೂರು

ವಿದ್ಯುತ್‌ ಕೇಬಲ್‌ಗೆ ಹಾನಿ ಆರೋಪ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2020, 6:33 IST
Last Updated 15 ಅಕ್ಟೋಬರ್ 2020, 6:33 IST

ಬೆಂಗಳೂರು: ವಿದ್ಯುತ್‌ ಕೇಬಲ್‌ಗೆ ಹಾನಿ ಮಾಡುವ ಮೂಲಕ ವಿದ್ಯುತ್‌ ವಿತರಣೆಗೆ ತೊಂದರೆ ಮಾಡಿದ್ದಾರೆ ಎಂದು ಆರೋಪಿಸಿ, ಬೆಸ್ಕಾಂ ಅಧಿಕಾರಿಯು ಜಿಯೊ ದೂರಸಂಪರ್ಕ ಕಂಪನಿ ಮತ್ತು ಅದರ ಸಹವರ್ತಿ ಕಂಪನಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಜಿಯೊ ಮತ್ತು ವೆರಿಕ್ಸ್ ನೆಟ್‌ವರ್ಕ್‌ನ ಮುನೀಂದ್ರ ಎಂಬುವರ ವಿರುದ್ಧ ಬೆಳ್ಳಂದೂರು ಪೊಲೀಸ್‌ ಠಾಣೆಗೆಬೆಸ್ಕಾಂನ ಸಹಾಯಕ ಎಂಜಿನಿಯರ್‌ ಲಕ್ಷ್ಮಿನಾರಾಯಣ ರೆಡ್ಡಿ ಮಂಗಳವಾರ ದೂರು ನೀಡಿದ್ದಾರೆ. ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪವನ್ನೂ ಮಾಡಿದ್ದಾರೆ.

‘ಜಿಯೊ ಕಂಪನಿಗೆ ಕೆಲಸ ಮಾಡುತ್ತಿರುವ ವೆರಿಕ್ಸ್‌ ನೆಟ್‌ವರ್ಕ್‌ನ ಪ್ರತಿನಿಧಿಗಳು ಸೋಮವಾರ ರಸ್ತೆ ಅಗೆಯುವ ವೇಳೆಗೆ
ವಿದ್ಯುತ್‌ ಕೇಬಲ್‌ಗೆ ಹಾನಿ ಮಾಡಿದ್ದಾರೆ. ಇದರಿಂದ ವಿವಿಧ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯವಾಗಿದೆ. ಹಲವು ಗ್ರಾಹಕರು ದೂರು ನೀಡಿದರು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ವೆರಿಕ್ಸ್ ನೆಟ್‌ವರ್ಕ್‌ ಕಂಪನಿಯವರು ವಿದ್ಯುತ್‌ ಕೇಬಲ್‌ಗೆ ಹಾನಿ ಮಾಡಿರುವುದು ಗಮನಕ್ಕೆ ಬಂದಿತು’ ಎಂದು ಲಕ್ಷ್ಮಿನಾರಾಯಣ ರೆಡ್ಡಿ ದೂರಿನಲ್ಲಿ ಹೇಳಿದ್ದಾರೆ.

ADVERTISEMENT

‘ಬೆಸ್ಕಾಂ ಸಿಬ್ಬಂದಿ ತಕ್ಷಣಕ್ಕೆ ಸ್ಥಳಕ್ಕೆ ತೆರಳಿ ವಿದ್ಯುತ್‌ ಕೇಬಲ್‌ ದುರಸ್ತಿಗೊಳಿಸಿ, ವಿದ್ಯುತ್‌ ಪೂರೈಕೆಗೆ ವ್ಯವಸ್ಥೆ ಮಾಡಿದ್ದಾರೆ. ಇದಕ್ಕೆ ಸುಮಾರು ₹1 ಲಕ್ಷ ವೆಚ್ಚವಾಗಿದೆ’ ಎಂದೂ ಅವರು ಹೇಳಿದ್ದಾರೆ.

ಪ್ರಕರಣದ ಬಗ್ಗೆ ಬೆಳ್ಳಂದೂರು ಪೊಲೀಸರು ಕಂಪನಿಯ ಪ್ರತಿನಿಧಿಗಳ ಪ್ರತಿಕ್ರಿಯೆ ಕೇಳಿ, ನೋಟಿಸ್ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.