ADVERTISEMENT

ರಾಜಕಾಲುವೆ ಒತ್ತುವರಿ: ದೇವಸ್ಥಾನ ಬಳಿಯ ಕಟ್ಟಡ ತೆರವು

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 20:48 IST
Last Updated 23 ಜೂನ್ 2021, 20:48 IST
ಗಣಪತಿ ದೇವಸ್ಥಾನ ಬಳಿಯ ಕಟ್ಟಡವನ್ನು ಧ್ವಂಸಗೊಳಿಸುತ್ತಿರುವುದು
ಗಣಪತಿ ದೇವಸ್ಥಾನ ಬಳಿಯ ಕಟ್ಟಡವನ್ನು ಧ್ವಂಸಗೊಳಿಸುತ್ತಿರುವುದು   

ಬೆಂಗಳೂರು: ಇಲ್ಲಿನ ಬನಶಂಕರಿ ಎರಡನೇ ಹಂತದ ಕಾವೇರಿ ನಗರದಲ್ಲಿರುವ ಗಣಪತಿ ದೇವಸ್ಥಾನವನ್ನು ರಾಜಕಾಲುವೆ ಮೇಲೆ ನಿರ್ಮಿಸಲಾಗಿದ್ದು, ಇದನ್ನು ತೆರವುಗೊಳಿಸುವ ಕಾರ್ಯಕ್ಕೆ ಬಿಬಿಎಂಪಿ ಮುಂದಾಗಿದೆ. ದೇವಸ್ಥಾನಕ್ಕೆ ಹೊಂದಿಕೊಂಡಂತೆ ನಿರ್ಮಿಸಲಾಗಿದ್ದ ಭವನವನ್ನು ಈಗಾಗಲೇ ಧ್ವಂಸಗೊಳಿಸಲಾಗಿದೆ.

‘40 ವರ್ಷಗಳ ಹಿಂದೆ ಈ ದೇವಸ್ಥಾನ ನಿರ್ಮಿಸಲಾಗಿದೆ. ಈಗ ಬಿಬಿಎಂಪಿಯು ದೇವಸ್ಥಾನ ಧ್ವಂಸಗೊಳಿಸಲು ಮುಂದಾಗಿದೆ. ಪಕ್ಕದ ಅಪಾರ್ಟ್‌ಮೆಂಟ್‌ ಸಮುಚ್ಚಯದವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹೀಗೆ ಮಾಡಲಾಗುತ್ತಿದೆ. ದೇವಸ್ಥಾನದ ಇನ್ನೊಂದು ಬದಿಯಲ್ಲಿನ ರಾಜಕಾಲುವೆ ಸ್ವಚ್ಛಗೊಳಿಸುವ ಮೂಲಕ ನೀರು ಹೋಗುವ ವ್ಯವಸ್ಥೆ ಮಾಡಬಹುದಾಗಿದೆ’ ಎಂದು ಸ್ಥಳೀಯ ನಿವಾಸಿ ವೆಂಕಟೇಶ್‌ ಹೇಳಿದರು.

‘ದೇವಸ್ಥಾನವನ್ನು ಧ್ವಂಸಗೊಳಿಸುತ್ತಿಲ್ಲ. ಮಳೆ ನೀರುಗಾಲುವೆ ಮೇಲೆಯೇ ಕಟ್ಟಡ ನಿರ್ಮಿಸಲಾಗಿದೆ. ಕಾಲುವೆ ಕೆಳಗೆ ನೀರು ನಿಂತು ಕಟ್ಟಡವೂ ಕೂಡ ಕುಸಿಯುವ ಹಂತದಲ್ಲಿದೆ. ಅಲ್ಲದೆ, ಮಳೆ ಬಂದಾಗ ಈ ಸ್ಥಳದಲ್ಲಿ ಒಂದೆರಡು ಬಾರಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕಾರಣದಿಂದ ದೇವಸ್ಥಾನಕ್ಕೆ ಹೊಂದಿಕೊಂಡಂತಿರುವ ಭವನವನ್ನು ಧ್ವಂಸಗೊಳಿಸಲಾಗುತ್ತಿದೆ’ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಮರದ ಬೇರು ಕೂಡ ಹರಡಿಕೊಂಡು ಕಾಲುವೆ ಕೆಳಗೆ ಸೇರಿದೆ. ಹಾಗೆಯೇ ಬಿಟ್ಟರೆ ಕಟ್ಟಡ ಕುಸಿಯುವ ಅಪಾಯವಿದೆ. ಮಳೆ ಬಂದಾಗ ಅಕ್ಕ–ಪಕ್ಕದ ಮನೆಗಳಿಗೂ ನೀರು ನುಗ್ಗುವ ಅಪಾಯವಿದೆ. ಮಳೆನೀರುಗಾಲುವೆ ಮತ್ತು ರಾಜಕಾಲುವೆಯನ್ನು ಈ ರೀತಿ ಒತ್ತುವರಿ ಮಾಡಿಕೊಳ್ಳುವಂತಿಲ್ಲ’ ಎಂದೂ ಹೇಳಿದರು.

‘ಯಾವುದೇ ಅಪಾರ್ಟ್‌ಮೆಂಟ್‌ನವರಿಗೆ ಅನುಕೂಲ ಮಾಡಿಕೊಡಲಾಗುತ್ತಿದೆ ಎಂಬ ಆರೋಪ ಸುಳ್ಳು. 10 ಅಡಿ ಅಗಲದ ಕಾಲುವೆಯ ಸ್ಥಳವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಇದನ್ನು ತೆರವುಗೊಳಿಸದಿದ್ದರೆ ಅಕ್ಕ–ಪಕ್ಕದ ನಿವಾಸಿಗಳಿಗೇ ಅಪಾಯವಾಗಲಿದೆ. ರಾಜಕಾಲುವೆ ಒತ್ತುವರಿ ಮಾಡಿಕೊಳ್ಳುವುದು ನಿಯಮಕ್ಕೆ ವಿರುದ್ಧ. ಕಾನೂನಿನ ಪ್ರಕಾರ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತಿದ್ದೇವೆ’ ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.