ADVERTISEMENT

ಪರಪ್ಪನ ಅಗ್ರಹಾರ ಕಾರಾಗೃಹ: 19 ಮೊಬೈಲ್‌, 16 ಸಿಮ್‌ ಕಾರ್ಡ್‌ ಪತ್ತೆ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 15:30 IST
Last Updated 28 ನವೆಂಬರ್ 2025, 15:30 IST
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ 
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ    

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳು ಹಾಗೂ ಸಜಾ ಬಂದಿಗಳಿರುವ ವಿವಿಧ ಬ್ಯಾರಕ್‌ಗಳಲ್ಲಿ ಜೈಲಿನ ಸಿಬ್ಬಂದಿ ದಿಢೀರ್ ದಾಳಿ ನಡೆಸಿ ಪರಿಶೀಲಿಸಿದಾಗ ಮತ್ತಷ್ಟು ಮೊಬೈಲ್‌ ಹಾಗೂ ಸಿಮ್‌ ಕಾರ್ಡ್‌ಗಳು ಪತ್ತೆಯಾಗಿವೆ.

ಪರಿಶೀಲನೆಯ ವೇಳೆ 19 ಮೊಬೈಲ್‌ ಫೋನ್‌ಗಳು, 16 ಸಿಮ್ ಕಾರ್ಡ್​ಗಳು, 4 ಚಾರ್ಜರ್ ವೈರ್​ಗಳು, ಮೂರು ಇಯರ್ ಬಡ್ಸ್​ಗಳು ಹಾಗೂ ₹15,800 ನಗದು ಪತ್ತೆಯಾಗಿದ್ದು ಜಪ್ತಿ ಮಾಡಲಾಗಿದೆ ಎಂದು ಜೈಲಿನ ಮೂಲಗಳು ಹೇಳಿವೆ. ಬುಧವಾರ ರಾತ್ರಿ ಹಾಗೂ ಗುರುವಾರ ಮುಂಜಾನೆ ಪರಿಶೀಲನೆ ನಡೆಸಲಾಗಿದೆ.

ಜೈಲಿನ ಸಹಾಯಕ ಸೂಪರಿಂಟೆಂಡೆಂಟ್ ಶಿವಾನಂದ ಶಿವಾಪುರ ಹಾಗೂ ಜೈಲರ್‌ ಎಚ್.ಎನ್‌.ಅಭಿಷೇಕ್‌ ನೇತೃತ್ವದ ತಂಡವು ವಿವಿಧ ಬ್ಯಾರಕ್‌ಗಳ ಮೇಲೆ ದಿಢೀರ್ ದಾಳಿ ನಡೆಸಿ, ಪರಿಶೀಲನೆ ನಡೆಸಿತು.

ADVERTISEMENT

ಜೈಲಿನಲ್ಲಿ ಅಕ್ರಮ ತಡೆಗಟ್ಟಲು ಹಾಗೂ ಸುಧಾರಣೆ ತರಲು ಮೊದಲ ಬಾರಿಗೆ ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿ ಅಂಶು ಕುಮಾರ್ ಅವರನ್ನು ನಿಯೋಜಿಸಿದೆ. ಅವರ ಮಾರ್ಗದರ್ಶನದಲ್ಲಿ ಜೈಲಿನ ಅಧಿಕಾರಿಗಳು ದಾಳಿ ನಡೆಸಿ ತಪಾಸಣೆ ನಡೆಸಿದ್ದಾರೆ ಎಂದು ಗೊತ್ತಾಗಿದೆ. 

ಸಜಾಬಂದಿಗಳಾದ ಸಾಗರ್ ಆಲಿಯಾಸ್ ರಕೀಬುಲ್ಲಾ ಮುನಿರಾಜು ಸೇರಿ ಇತರೆ ಬಂದಿಗಳ ವಿರುದ್ಧ ಕರ್ನಾಟಕ ಕಾರಾಗೃಹ (ತಿದ್ದುಪಡಿ) ಅಧಿನಿಯಮದ ಕಲಂ 22 ಹಾಗೂ ಇತರೆ ಕಲಂಗಳ ಅಡಿಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಲೆದಿಂಬು, ಶೌಚಾಲಯದ ಗೋಡೆ ಒಳಗೆ ಮೊಬೈಲ್ ಪತ್ತೆ: ಸಜಾಬಂದಿ ಸಾಗರ್ ಬಳಸುತ್ತಿದ್ದ ಹಾಸಿಗೆಯಲ್ಲಿ ಒನ್ ಪ್ಲಸ್ ಕಂಪನಿಯ ಒಂದು ಮೊಬೈಲ್ ಹಾಗೂ ಸಿಮ್ ಕಾರ್ಡ್ ಹಾಗೂ ಮತ್ತೊಬ್ಬ ಸಜಾಬಂದಿ ಮುನಿರಾಜು ಬಳಸುತ್ತಿದ್ದ ದಿಂಬಿನಲ್ಲಿ ರೆಡ್ ಮಿ ಕಂಪನಿಯ ಒಂದು ಮೊಬೈಲ್, ಸಿಮ್ ಕಾರ್ಡ್ ದೊರೆತಿದೆ. 5ನೇ ಬ್ಯಾರಕ್​ನ ಶೌಚಾಲಯಕ್ಕೆ ತೆರಳುವ ಗೋಡೆಗಳ ಮೇಲೆ ಎರಡು ಚಾರ್ಜರ್ ವೈರ್ ಹಾಗೂ ಒಂದು ಇಯರ್ ಬಡ್‌ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿಷೇಧಿತ ವಸ್ತುಗಳನ್ನು ಸಾಗಿಸಿದವರು, ಕೃತ್ಯಕ್ಕೆ ಸಹಕಾರ ನೀಡಿದವರು ಹಾಗೂ ನಿಷೇಧಿತ ವಸ್ತುಗಳನ್ನು ಕಾರಾಗೃಹದಲ್ಲಿ ಉಪಯೋಗಿಸಿದವರ ವಿರುದ್ಧ ಕಾರಾಗೃಹ (ತಿದ್ದುಪಡಿ) ಅಧಿನಿಯಮ–2022ರ ಕಲಂ 42ರ ಅನ್ವಯ ಪ್ರಕರಣ ದಾಖಲಿಸಿಕೊಂಡು ಕ್ರಮ ಜರುಗಿಸಲು ಪರಪ್ಪನ ಅಗ್ರಹಾರ ಠಾಣೆಗೆ ದೂರು ನೀಡಲಾಗಿದೆ. ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.