ADVERTISEMENT

ಕೆಎಎಸ್‌ ಪೂರ್ವಭಾವಿ ಪರೀಕ್ಷೆಯ ಫಲಿತಾಂಶ ರದ್ದುಗೊಳಿಸಿ: ರಾಜ್ಯ ದಲಿತ ಪದವೀಧರರ ಸಂಘ

​ಪ್ರಜಾವಾಣಿ ವಾರ್ತೆ
Published 13 ಜನವರಿ 2025, 16:24 IST
Last Updated 13 ಜನವರಿ 2025, 16:24 IST
   

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ 384 ಅಧಿಕಾರಿಗಳ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಇತ್ತೀಚೆಗೆ ನಡೆಸಿದ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ರದ್ದುಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ದಲಿತ ಪದವೀಧರರ ಸಂಘ ಆಗ್ರಹಿಸಿದೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಲೋಕೇಶ್ ವಿ., ‘ಈ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆ 1ರ 32 ಪ್ರಶ್ನೆಗಳು ಹಾಗೂ ಪ್ರಶ್ನೆಪತ್ರಿಕೆ–02ರ 27 ಪ್ರಶ್ನೆಗಳು ಸೇರಿ ಒಟ್ಟು 59 ಪ್ರಶ್ನೆಗಳಲ್ಲಿ ಭಾಷಾಂತರ ದೋಷ ಹಾಗೂ ತಪ್ಪುಗಳಿವೆ. ಇಂಗ್ಲಿಷ್‌ನಲ್ಲಿದ್ದ ಪ್ರಶ್ನೆಗಳ ಮೂಲ ಅರ್ಥಕ್ಕೂ ಕನ್ನಡ ಅನುವಾದಗೊಂಡ ಪ್ರಶ್ನೆಗಳ ಅರ್ಥಕ್ಕೂ ವ್ಯತ್ಯಾಸಗಳು ಕಂಡು ಬಂದಿವೆ’ ಎಂದು ಆರೋಪಿಸಿದರು.

‘ಪ್ರಶ್ನೆಗಳ ವಾಕ್ಯರಚನೆಯಲ್ಲಿ ಹಲವು ದೋಷಗಳು ಉಳಿದುಕೊಂಡಿದ್ದವು. ಕನ್ನಡ ಮಾಧ್ಯಮದ ಅಭ್ಯರ್ಥಿಗಳು ಈ ಪ್ರಶ್ನೆಗಳನ್ನು ಸುಲಭವಾಗಿ ಗ್ರಹಿಸಿ ಅರ್ಥಮಾಡಿಕೊಳ್ಳಲು ಆಗಿರಲಿಲ್ಲ. ಕೆಪಿಎಸ್‌ಸಿಯಲ್ಲಿ ಭಾಷಾಂತರ ವಿಭಾಗವಿಲ್ಲ. ಕನ್ನಡದಲ್ಲಿ ಮೊದಲು ಪ್ರಶ್ನೆಪತ್ರಿಕೆ ತಯಾರಿಸಿ, ನಂತರ ಇಂಗ್ಲಿಷ್‌ಗೆ ಭಾಷಾಂತರ ಮಾಡದಿರುವುದು ಈ ಅನಾಹುತಕ್ಕೆ ಕಾರಣವಾಗಿದೆ. ಇದರಿಂದ ಕನ್ನಡ ಮಾಧ್ಯಮ ಹಾಗೂ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ’ ಎಂದು ದೂರಿದರು.

ADVERTISEMENT

‘ಕೋಲಾರ, ವಿಜಯಪುರ, ರಾಮನಗರ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಸಾವಿರಾರು ಅಭ್ಯರ್ಥಿಗಳಿಗೆ ಒಎಂಆರ್‌ ಶೀಟ್‌ಗಳನ್ನು ಬದಲಾಯಿಸಿ ನೀಡಲಾಗಿದೆ. ಇದರಲ್ಲಿ ಅವ್ಯವಹಾರ ನಡೆಯುವ ಸಾಧ್ಯತೆ ಇದೆ. ಈ ಎಲ್ಲ ಲೋಪದೋಷಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.