
ಭಾರತ ವಿದ್ಯಾರ್ಥಿ ಫೆಡರೇಷನ್ ರಾಜ್ಯ ಸಮಿತಿ ವತಿಯಿಂದ ದುಂಡು ಮೇಜಿನ ಸಭೆ ನಡೆಯಿತು
ಪ್ರಜಾವಾಣಿ ಚಿತ್ರ
ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ಕೆಲವನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಎಂದು ಮೇಲ್ದರ್ಜೆಗೆ ಏರಿಸುವ ಮೂಲಕ ಉಳಿದವುಗಳನ್ನು ಮುಚ್ಚುವ ಸ್ಥಿತಿಗೆ ತರುವ ಹುನ್ನಾರ ನಡೆಯುತ್ತಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ ರಾಜ್ಯ ಸಮಿತಿ ದೂರಿದೆ.
ಶುಕ್ರವಾರ ಫೆಡರೇಷನ್ ಈ ಬಗ್ಗೆ ದುಂಡುಮೇಜಿನ ಸಭೆ ನಡೆಸಿತು. ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮುನಿರಾಜು ಎಂ., ಎಸ್‌ಎಫ್‌ಐ ಅಧ್ಯಕ್ಷ ಶಿವಪ್ಪ ಅಂಬ್ಲಿಕಲ್, ಉಪಾಧ್ಯಕ್ಷ ಬಸವರಾಜ ಎಸ್., ಬಿಜಿವಿಎಸ್ ಮುಖಂಡರಾದ ಚೇಗರೆಡ್ಡಿ, ಶುಂಭಾಂಕರ, ಚಿಂತಕರಾದ ಬಿ.ಶ್ರೀಪಾದಭಟ್, ಸುರೇಂದ್ರರಾವ್, ಎಐಡಿಎಸ್‌ಒ ಮುಖಂಡರಾದ ವಿನಯ ಚಂದ್ರ, ಅಭಯ ಡಿ., ಸಿಐಟಿಯುನ ವರಲಕ್ಷ್ಮೀ, ಎಐಎಸ್ಎ ಸಂಘಟನೆ ಅರಾರ್ತಿಕಾ, ಎಸ್‌ಡಿಎಂಸಿ ಸಂಘಟನೆಯ ಮೈನುದಿನ್, ಕೆಪಿಆರ್‌ಎಸ್‌ನ ಯಶವಂತ ಸಹಿತ ಅನೇಕರು ಭಾಗವಹಿಸಿದ್ದರು.
ಪಂಚಾಯತಿಗೊಂದು ಕರ್ನಾಟಕ ಪಬ್ಲಿಕ್ ಶಾಲೆ ಎಂಬುದು ಸಂಪೂರ್ಣ ಜಾರಿಯಾಗಿ, ಶಾಲೆಗಳನ್ನು ವಿಲೀನಮಾಡಿದರೆ ರಾಜ್ಯದಲ್ಲಿ ಇರುವ 47,493 ಶಾಲೆ ಪೈಕಿ 7,000 ಕರ್ನಾಟಕ ಪಬ್ಲಿಕ್ ಶಾಲೆಗಳಾಗಿ ಉಳಿಯಲಿವೆ. ಸುಮಾರು 40,000 ಸರ್ಕಾರಿ ಶಾಲೆಗಳಿಗೆ ಬೀಗ ಬೀಳಲಿದೆ ಎಂದು ಎಚ್ಚರಿಸಿದರು.
ಒಂದೇ ಸೂರಿನಡಿಯಲ್ಲಿ ಎಲ್‌ಕೆಜಿಯಿಂದ ಪದವಿ ಪೂರ್ವ ಶಿಕ್ಷಣದವರೆಗೆ ಗುಣಮಟ್ಟದ ಶಿಕ್ಷಣವನ್ನು ನೀಡಲು 500 ಹೊಸ ಪಬ್ಲಿಕ್ ಶಾಲೆ ತೆರೆಯುವುದಾಗಿ ಸರ್ಕಾರ ಘೋಷಣೆ ಮಾಡಿ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ ₹ 2,500 ಕೋಟಿ ಸಾಲ ಪಡೆಯಿತು. ಆದರೆ, ಸರ್ಕಾರವು ಹೊಸ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯದೇ ಇರುವ ಶಾಲೆಗಳನ್ನೇ ಪಂಚಾಯಿತಿಗೊಂದು ಶಾಲೆಯಾಗಿ ಉನ್ನತೀಕರಣ ಮಾಡುತ್ತಿದೆ. ಹೇಳಿದ್ದೊಂದು ಮಾಡಿದ್ದು ಇನ್ನೊಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರಿ ಶಾಲೆಗಳಲ್ಲಿ ಬಡವರ ಮಕ್ಕಳಷ್ಟೇ ಓದುತ್ತಿದ್ದಾರೆ. ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳ ಸಂಖ್ಯೆ ಕುಸಿತವಾಗುತ್ತಿದೆ. ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆಯುವವರ ಪ್ರಮಾಣ ಹೆಚ್ಚುತ್ತಿದೆ. ಮೂಲ ಸೌಲಭ್ಯ, ಅಗತ್ಯ ಶಿಕ್ಷಕರು, ಸಿಬ್ಬಂದಿಯನ್ನು ಕಲ್ಪಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಬಲಪಡಿಸುವ ಬದಲು ಮುಚ್ಚುವ ಯೋಜನೆಗಳನ್ನು ತರಲಾಗುತ್ತಿದೆ ಎಂದು ದೂರಿದರು.
ಕೆಪಿಎಸ್ ಯೋಜನೆಯನ್ನು ಕೈಬಿಡಬೇಕು. ಈಗಿರುವ ಸರ್ಕಾರಿ ಶಾಲೆಗಳನ್ನು ಉಳಿಸಲು ಕಾರ್ಯಕ್ರಮ ರೂಪಿಸಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.