ADVERTISEMENT

ಬೆಂಗಳೂರು: ಜಯನಗರದ ಕಾಸ್ಮೊಪಾಲಿಟನ್‌ ಕ್ಲಬ್‌ ಮಾನ್ಯತೆ ರದ್ದು ಸಾಧ್ಯತೆ!

ಸಾಮಾಜಿಕ ಕಾರ್ಯಗಳು ರದ್ದು; ಬಿಡಿಎಗೆ ಗುತ್ತಿಗೆ ಕರಾರಿನ ಷರತ್ತುಗಳ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2023, 0:11 IST
Last Updated 22 ಆಗಸ್ಟ್ 2023, 0:11 IST
ಕಾಸ್ಮೊಪಾಲಿಟನ್‌ ಕ್ಲಬ್‌ 
ಕಾಸ್ಮೊಪಾಲಿಟನ್‌ ಕ್ಲಬ್‌    

ಬೆಂಗಳೂರು: ಬಿಡಿಎಗೆ ಮುಚ್ಚಳಿಕೆ ಬರೆದುಕೊಟ್ಟಿರುವ ಷರತ್ತುಗಳನ್ನೇ ಉಲ್ಲಂಘಿಸಿರುವ ಜಯನಗರದ ಪ್ರತಿಷ್ಠಿತ ಕಾಸ್ಮೊಪಾಲಿಟನ್‌ ಕ್ಲಬ್‌ ತನ್ನ ಮಾನ್ಯತೆ ಹಾಗೂ ಜಾಗವನ್ನು ಕಳೆದುಕೊಳ್ಳುವ ಭೀತಿ ಎದುರಿಸುತ್ತಿದೆ.

ವಾಣಿಜ್ಯ ಕೇಂದ್ರಗಳ ನಿರ್ಮಾಣ ಹಾಗೂ ಕಾರ್ಯಾಚರಣೆಗೆ ಅನುವು ಮಾಡಿಕೊಡಬೇಕು. ಇದರ ಬದಲಾಗಿ, ಕಾಸ್ಮೊಪಾಲಿಟನ್‌ ಕ್ಲಬ್‌ ಸುತ್ತಮುತ್ತಲಿನ ಪ್ರದೇಶಗಳ ನಾಗರಿಕರಿಗೆ ಮತ್ತು ಕ್ಲಬ್‌ನಲ್ಲಿ ಕಾರ್ಯನಿರ್ವಹಿಸುವ ಕಾರ್ಮಿಕರಿಗೆ ಮಧ್ಯಾಹ್ನದ ಊಟ ಸೇರಿದಂತೆ ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡಲಾಗುತ್ತದೆ ಎಂದು ಗುತ್ತಿಗೆ ಕರಾರು ಪತ್ರದಲ್ಲಿ ನಮೂದಿಸಲಾಗಿದೆ. ಆದರೆ ಇದೀಗ ಸಾಮಾಜಿಕ ಸೇವಾ ಕಾರ್ಯಗಳನ್ನು ನಿಲ್ಲಿಸಲಾಗಿದೆ.

ಮೂರು ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ಕಾಸ್ಮೊಪಾಲಿಟನ್‌ ಕ್ಲಬ್‌ 2000–2001ರಲ್ಲಿ 30 ವರ್ಷಗಳಿಗೆ ಬಿಡಿಎಯಿಂದ ಗುತ್ತಿಗೆ ಪಡೆದುಕೊಂಡಿತ್ತು. ಇದರಲ್ಲಿ ಸಾಮಾಜಿಕ ಕಾರ್ಯ ನಡೆಸುವ ಬಗ್ಗೆ ಹೇಳಿ, 2009ರಲ್ಲಿ ‘ಕಾಸ್ಮೊಪಾಲಿಟನ್‌ ಕ್ಲಬ್‌ ಕಾರ್ಪಸ್‌ ಫಂಡ್‌ ಟ್ರಸ್ಟ್‌’ ಅನ್ನು ಸ್ಥಾಪಿಸಲಾಗಿತ್ತು. ಈ ಮೂಲಕ ಪುಸ್ತಕ, ಬಟ್ಟೆ ವಿತರಣೆ ಸೇರಿದಂತೆ ಹಲವು ರೀತಿಯ ಕಾರ್ಯ ಮಾಡಲಾಗುತ್ತಿತ್ತು. ಆದಾಯ ತೆರಿಗೆ ಕಾಯ್ದೆ 80ಜಿ ಅಡಿ ಹಲವರು ಲಕ್ಷಾಂತರ ದೇಣಿಗೆಯನ್ನೂ ನೀಡಿದ್ದರು. 

ADVERTISEMENT

ಪಾಯಸ, ತುಪ್ಪ ಸೇರಿದಂತೆ ಅತ್ಯುತ್ತಮ ದರ್ಜೆಯ ಮಧ್ಯಾಹ್ನದ ಊಟವನ್ನು ಸುಮಾರು ಸಾವಿರ ಜನರಿಗೆ ಕ್ಲಬ್‌ನಲ್ಲಿ ಪ್ರತಿದಿನ ಒದಗಿಸಲಾಗುತ್ತಿತ್ತು. ಆದರೆ, ಇದನ್ನೂ ಈಗ ನಿಲ್ಲಿಸಲು ಕ್ಲಬ್‌ ಸರ್ವ ಸದಸ್ಯರ ಸಭೆಯಲ್ಲಿ ನಿರ್ಧರಿಸಲಾಗಿದೆ. ಇದರಂತೆ ಆಗಸ್ಟ್‌ 1ರಿಂದ ಮಧ್ಯಾಹ್ನದ ಊಟ ನೀಡಲಾಗುತ್ತಿಲ್ಲ. ಈ ಮೂಲಕ ಎಲ್ಲ ಸಾಮಾಜಿಕ ಕಾರ್ಯಗಳು ನಿಂತಂತಾಗಿದ್ದು, ಬಿಡಿಎಗೆ ಬರೆದುಕೊಟ್ಟಿದ್ದ ಮುಚ್ಚಳಿಕೆಯ ಉಲ್ಲಂಘನೆಯಾಗಿದೆ.

69 ಸಾವಿರ ಚದರ ಅಡಿ ಮೂಲೆ ಸ್ವತ್ತನ್ನು ಹೊಂದಿರುವ ಕಾಸ್ಮೊಪಾಲಿಟನ್‌ ಕ್ಲಬ್‌, ಮುಚ್ಚಳಿಕೆಯಂತೆ ವಾಣಿಜ್ಯ ಕೇಂದ್ರಗಳನ್ನೂ ನಿರ್ಮಿಸಿಕೊಂಡಿದೆ. ಇದರಿಂದ ಪ್ರತಿ ತಿಂಗಳು ₹15 ಲಕ್ಷದಷ್ಟು ಬಾಡಿಗೆ ಬರುತ್ತಿದೆ. ಸಾಮಾಜಿಕ ಕಾರ್ಯಗಳನ್ನು ನಿಲ್ಲಿಸಿರುವುದರಿಂದ ವಾಣಿಜ್ಯ ಉದ್ದೇಶಕ್ಕೆ ಕೇಂದ್ರಗಳ ಬಾಡಿಗೆ ಬಿಡಿಎಗೆ ಸಂದಾಯವಾಗಬೇಕು. ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಬೆಂಗಳೂರು ನಾಗರಿಕ ಹಕ್ಕು ಹೋರಾಟ ಸಮಿತಿಯ ಗಣೇಶ್‌ ಸಿಂಗ್‌ ಅವರು ಬಿಡಿಎ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

‘ಸಾಮಾಜಿಕ ಕಾರ್ಯ ಮಾಡುವುದಾಗಿ ಮುಚ್ಚಳಿಕೆ ನೀಡಿದ್ದರಿಂದ 69 ಸಾವಿರ ಅಡಿಗಳ ವಿಸ್ತೀರ್ಣದ ಆಸ್ತಿಗೆ 30 ವರ್ಷಗಳಿಗೆ ₹1 ಕೋಟಿ ರೂಪಾಯಿ ಬಾಡಿಗೆಯನ್ನು (ಮಾಸಿಕ ಸುಮಾರು ₹27 ಸಾವಿರ) ಮಾತ್ರ ಕ್ಲಬ್‌ ಪಾವತಿಸುತ್ತಿದೆ. ಕರಾರು ಉಲ್ಲಂಘಿಸಿರುವುದರಿಂದ ತಿಂಗಳಿಗೆ ಕನಿಷ್ಠ ₹5 ಲಕ್ಷ ಬಾಡಿಗೆ ಬಿಡಿಎಗೆ ಲಭ್ಯವಾಗಲಿದೆ. ಸುಮಾರು ₹600 ಕೋಟಿಗೂ ಹೆಚ್ಚಿನ ಮೌಲ್ಯದ ಈ ಸ್ವತ್ತಿನ ಗುತ್ತಿಗೆಯನ್ನು ರದ್ದು ಮಾಡಬೇಕು. ಬಿಡಿಎ ವತಿಯಿಂದ ಕ್ಲಬ್‌ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.

ಮುಚ್ಚಳಿಕೆ ಬರೆದುಕೊಟ್ಟಿದ್ದೆ

ಅಧ್ಯಕ್ಷ ‘ವಾಣಿಜ್ಯ ಉದ್ದೇಶಕ್ಕಾಗಿ ಕಟ್ಟಡ ನಿರ್ಮಿಸುವ ಸಂದರ್ಭದಲ್ಲಿ ಸಾಕಷ್ಟು ಕಾನೂನು ತೊಂದರೆಗಳಾದವು. ಪಾರ್ಕಿಂಗ್‌ ಸ್ಥಳ ನಿರ್ಮಿಸಲು ಮತ್ತೊಂದು ಪ್ರದೇಶವನ್ನೂ ತೆಗೆದುಕೊಂಡೆವು. ಇದಕ್ಕೆಲ್ಲ ಪ್ರತಿಯಾಗಿ ಸಾಮಾಜಿಕ ಕಾರ್ಯಗಳನ್ನು ಮಾಡುವುದಾಗಿ ನಾನು ಕಾರ್ಯದರ್ಶಿಯಾಗಿದ್ದಾಗಲೇ ಕ್ಲಬ್‌ ವತಿಯಿಂದ ಮುಚ್ಚಳಿಕೆ ಬರೆದುಕೊಡಲಾಗಿದೆ. ಈಗ ಸಾಮಾಜಿಕ ಕಾರ್ಯಗಳು ನಿಂತಿರುವುದರಿಂದ ಅದರ ಉಲ್ಲಂಘನೆಯಾಗಿದೆ’ ಎಂದು ಕಾಸ್ಮೊಪಾಲಿಟನ್‌ ಕ್ಲಬ್‌ ಅಧ್ಯಕ್ಷ ಕುಮಾರ ರಾಜು ತಿಳಿಸಿದರು. ‘ಸುಮಾರು ಒಂದು ಸಾವಿರ ಜನರಿಗೆ ಮಧ್ಯಾಹ್ನದ ಊಟ ನೀಡಲಾಗುತ್ತಿತ್ತು. ಆದರೆ ಇತ್ತೀಚೆಗೆ ನಡೆದ ಸರ್ವ ಸದಸ್ಯ ಸಭೆಯಲ್ಲಿ ಇದನ್ನು ನಿಲ್ಲಿಸಲು ಕೆಲವರು ಹಟ ಮಾಡಿದರು. ಅವರೆಲ್ಲ ಒತ್ತಾಯದಂತೆ ನನ್ನ ವಿರೋಧದ ನಡುವೆಯೂ ಸಾಮಾಜಿಕ ಕಾರ್ಯವಾದ ಮಧ್ಯಾಹ್ನ ಊಟ ನೀಡುವುದನ್ನು ನಿಲ್ಲಿಸಲು ನಿರ್ಣಯಿಸಲಾಯಿತು. ಅದರಂತೆ ಅದು ನಿಂತುಹೋಗಿದೆ’ ಎಂದು ಅವರು ಮಾಹಿತಿ ನೀಡಿದರು. ‘ನಾವು ಮೊದಲಿನಿಂದಲೂ ಕ್ಲಬ್‌ ಅನ್ನು ಕೇವಲ ಮೋಜಿನ ತಾಣವನ್ನಾಗಿ ಬೆಳೆಸಿಲ್ಲ. ಸಾಮಾಜಿಕ ಕಾರ್ಯಗಳನ್ನೂ ಮಾಡುತ್ತಿದ್ದೇವೆ. ವಿದ್ಯಾರ್ಥಿಗಳಿಗೆ ಪುಸ್ತಕ ಪೆನ್ನು ಬಡವರಿಗೆ ಊಟ ಸೇರಿದಂತೆ ಹಲವು ರೀತಿಯ ಕಾರ್ಯಗಳನ್ನು ಟ್ರಸ್ಟ್‌ ಸ್ಥಾಪಿಸಿಕೊಂಡು ಮಾಡುತ್ತಿದ್ದೇವೆ. ಟ್ರಸ್ಟ್‌ಗೆ ಕ್ಲಬ್‌ನಿಂದ ಒಂದು ರೂಪಾಯಿಯನ್ನೂ ನೀಡುತ್ತಿರಲಿಲ್ಲ. ಮಧ್ಯಾಹ್ನದ ಊಟಕ್ಕೆ ಸ್ಥಳವನ್ನು ಮಾತ್ರ ನೀಡಲಾಗುತ್ತಿತ್ತು. ಸಚಿವ ರಾಮಲಿಂಗಾರೆಡ್ಡಿ ಸೇರಿದಂತೆ ಹಲವು ದೇಣಿಗೆಯನ್ನು ನೀಡುತ್ತಿದ್ದರು. ಇದರಿಂದ ಸಾಮಾಜಿಕ ಕಾರ್ಯ ನಡೆಯುತ್ತಿದ್ದವು. ಇವುಗಳನ್ನು ನಿಲ್ಲಿಸಬೇಡಿ ಎಂದು ಎಲ್ಲ ರೀತಿಯ ಮನವಿ ಮಾಡಿಕೊಂಡರೂ ಕೆಲವರು ಹಿತಾಸಕ್ತಿಯಿಂದ ನಿರ್ಣಯ ಮಾಡಲಾಗಿದೆ. ಈ ಬಗ್ಗೆ ಬಿಡಿಎ ಅಧ್ಯಕ್ಷ ರಾಕೇಶ್‌ ಸಿಂಗ್‌ ಅವರಿಗೂ ಮಾಹಿತಿ ನೀಡಿದ್ದು ಕ್ರಮ ಕೈಗೊಳ್ಳಲು ಮನವಿ ಮಾಡಿಕೊಂಡಿದ್ದೇನೆ’ ಎಂದು ಕುಮಾರ ರಾಜು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.