ಕಾರ್ಯಕ್ರಮದಲ್ಲಿ 'ಮಾನವಿ ವಾರ್ಷಿಕ ವರದಿ' ಪುಸ್ತಕ ಬಿಡುಗಡೆಗೊಳಿಸಲಾಯಿತು
ಬೆಂಗಳೂರು:‘ಸಮುದಾಯಕ್ಕೆ ಶಿಕ್ಷಣ ನೀಡುವ ಮೂಲಕ ಸ್ತನ ಕ್ಯಾನ್ಸರ್ ನಿಯಂತ್ರಿಸಲು ಸಾಧ್ಯವಿದೆ’ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ನಿವೃತ್ತ ನಿರ್ದೇಶಕಿ ಡಾ. ವಿಜಯಲಕ್ಷ್ಮಿ ದೇಶಮಾನೆ ಅಭಿಪ್ರಾಯಪಟ್ಟರು.
ಬೆಂಗಳೂರು ವಿಶ್ವವಿದ್ಯಾಲಯ ಮಹಿಳಾ ಅಧ್ಯಯನ ಕೇಂದ್ರದಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇತ್ತೀಚೆಗೆ ಮಹಿಳೆಯರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಜೊತೆಗೆ, ಸ್ತನ ಕ್ಯಾನ್ಸರ್ ಕೂಡ ಹೆಚ್ಚಾಗುತ್ತಿದೆ. ಈ ಕ್ಯಾನ್ಸರ್ ವೇಗವಾಗಿ ಹರಡಿ, ಸೂಕ್ತ ಚಿಕಿತ್ಸೆಯಿಲ್ಲದೇ ನರಳುವಂತಾಗಿದೆ. ಆರಂಭದಲ್ಲಿಯೇ ರೋಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಪಡೆದರೆ ಶೇ 98ರಷ್ಟು ಗುಣಮುಖರಾಗಬಹುದು’ ಎಂದರು.
‘ಜೀವನಶೈಲಿ, ಸಂತಾನೋತ್ಪತ್ತಿ ಸಂಬಂಧಿತ ಸಮಸ್ಯೆ, ತಡವಾದ ಋತುಬಂಧ, ವಂಶಾವಳಿ ಕಾಯಿಲೆ, ರೇಡಿಯೇಷನ್‌ಗಳಿಂದ ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ಒಳಗಾಗುತ್ತಾರೆ. ಇದನ್ನು ಗುಣಪಡಿಸಲು ಯಾವುದೇ ನಿರ್ದಿಷ್ಟ ವೈದ್ಯಕೀಯ ಪರಿಕರಗಳು, ಪದ್ಧತಿ, ಚಿಕಿತ್ಸಾ ಮಾರ್ಗ ಲಭ್ಯವಿಲ್ಲ’ ಎಂದು ವಿವರಿಸಿದರು.
‘ಮಹಿಳೆಯರು ಪೌಷ್ಟಿಕ ಆಹಾರ ಸೇವಿಸಬೇಕು, ಆರೋಗ್ಯಕರ ಜೀವನ ಶೈಲಿ ಅಳವಡಿಸಿಕೊಳ್ಳಬೇಕು. ನಿಗದಿತ ಆರೋಗ್ಯ ತಪಾಸಣೆ ಮಾಡಿಸಬೇಕು. ಇದರಿಂದ ರೋಗವನ್ನು ನಿಯಂತ್ರಿಸಬಹುದಾಗಿದೆ’ ಎಂದು ಸಲಹೆ ನೀಡಿದರು.
‘ಸ್ತನ ಕ್ಯಾನ್ಸರ್ ಚಿಕಿತ್ಸೆ ಬಲು ದುಬಾರಿ. ಬಡವರು ಎಲ್ಲಿಂದ ಹಣ ತರುತ್ತಾರೆ? ಆ ನಿಟ್ಟಿನಲ್ಲಿ ಸ್ತನ ಕ್ಯಾನ್ಸರ್ ಕುರಿತು ಎಲ್ಲಾ ಸಂಸ್ಥೆಗಳು ಜಾಗೃತಿ ಮೂಡಿಸಬೇಕು’ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಮಹಿಳಾ ಉದ್ಯೋಗಿಗಳಿಗಾಗಿ ವಿಶೇಷ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಾಗಿ ಬಹುಮಾನ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.