ADVERTISEMENT

ಮಕ್ಕಳಲ್ಲಿ ರಕ್ತಕ್ಯಾನ್ಸರ್ ಹೆಚ್ಚಳ: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಿಂದ ಜಾಗೃತಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 20:15 IST
Last Updated 14 ಫೆಬ್ರುವರಿ 2022, 20:15 IST
ರಾಮಚಂದ್ರ
ರಾಮಚಂದ್ರ   

ಬೆಂಗಳೂರು: ಮಕ್ಕಳಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ರೋಗಕ್ಕೆ ಒಳಪಡುತ್ತಿರುವ 14 ವರ್ಷದೊಳಗಿನವರಲ್ಲಿ ಅರ್ಧದಷ್ಟು ಮಕ್ಕಳು ರಕ್ತದ ಕ್ಯಾನ್ಸರ್‌ಗೆ (ಲ್ಯುಕೇಮಿಯಾ) ಒಳಪಡುತ್ತಿದ್ದಾರೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ತಿಳಿಸಿದೆ.

ಫೆ.15ರಂದು ಅಂತರರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನದ ಪ್ರಯುಕ್ತ ಸಂಸ್ಥೆಯು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ರಾಜ್ಯದಲ್ಲಿನ 87,304 ಕ್ಯಾನ್ಸರ್ ಪ್ರಕರಣಗಳಲ್ಲಿ 1,323 (ಶೇ 3.1) ಪ್ರಕರಣಗಳು ಮಕ್ಕಳಲ್ಲಿ ಕಂಡುಬಂದಿವೆ. 679 ಬಾಲಕರು ಮತ್ತು 644 ಬಾಲಕಿಯರು ಕ್ಯಾನ್ಸರ್ ಪೀಡಿತರಾಗಿದ್ದಾರೆ. ಬೆಂಗಳೂರಿನ ಜನಸಂಖ್ಯೆ ಆಧಾರಿತ ಕ್ಯಾನ್ಸರ್ ನೋಂದಣಿವ್ಯವಸ್ಥೆಯಲ್ಲಿ ಪ್ರತಿ 10 ಲಕ್ಷಕ್ಕೆ 192 ಪ್ರಕರಣಗಳು ದಾಖಲಾಗುತ್ತಿವೆ. 114 ಬಾಲಕರು ಹಾಗೂ 78 ಬಾಲಕಿಯರು ಈ ರೋಗಕ್ಕೆ ಒಳಗಾಗುತ್ತಿದ್ದಾರೆ. ಮಕ್ಕಳ ಕ್ಯಾನ್ಸರ್‌ಗಳನ್ನು ತಡೆಗಟ್ಟಲಾಗುವುದಿಲ್ಲ.ಆದರೆ, ಅವುಗಳನ್ನು ಮೊದಲೇ ಪತ್ತೆಹಚ್ಚಬಹುದು ಎಂದು ಸಂಸ್ಥೆ ಹೇಳಿದೆ.

‘ಅಂತರರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ವರ್ಗೀಕರಣದ ಪ್ರಕಾರ ಶೇ 44.7 ರಷ್ಟು ಪ್ರಕರಣಗಳು ಲ್ಯುಕೇಮಿಯಾ. ವೈದ್ಯರು ಆರಂಭಿಕ ಹಂತದಲ್ಲಿಯೇ ತಪಾಸಣೆ ನಡೆಸಿ, ಕ್ಯಾನ್ಸರ್ ಪತ್ತೆ ಮಾಡಬೇಕು. ಯಾವುದೇ ಶಂಕಿತ ಕ್ತಾನ್ಸರ್ ಗೆಡ್ಡೆ ಇದ್ದರೆ ಮಕ್ಕಳ ಕ್ಯಾನ್ಸರ್ ಕೇಂದ್ರದಲ್ಲಿ ತಪಾಸಣೆಗೆ ಒಳಪಡುವಂತೆ ಶಿಫಾರಸುಮಾಡಬೇಕು. ತಡವಾಗಿ ತಪಾಸಣೆ, ಚಿಕಿತ್ಸೆ ನೀಡಿದಲ್ಲಿ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಳ್ಳಲಿದೆ. ಸಾರ್ವಜನಿಕರು ಮತ್ತು ವೈದ್ಯಕೀಯ ವೃತ್ತಿಪರರಲ್ಲಿ ಮಕ್ಕಳ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವುದು ಅಗತ್ಯ’ ಎಂದು ಸಂಸ್ಥೆ ನಿರ್ದೇಶಕ ಡಾ.ಸಿ. ರಾಮಚಂದ್ರ ತಿಳಿಸಿದ್ದಾರೆ.

ADVERTISEMENT

ಕಿದ್ವಾಯಿ: ಅಸ್ಥಿಮಜ್ಜೆ ಕಸಿಗೆ ಇಂದು ಚಾಲನೆ

ಬೆಂಗಳೂರು: ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿಅಸ್ಥಿಮಜ್ಜೆ (ಬೋನ್‌ ಮ್ಯಾರೊ) ಕಸಿ ಚಿಕಿತ್ಸೆಗೆ ಮಂಗಳವಾರ ಚಾಲನೆ ದೊರೆಯಲಿದೆ.

ಸಂಸ್ಥೆಯ ಆವರಣದಲ್ಲಿ ಈಗಾಗಲೇ ಅಸ್ಥಿಮಜ್ಜೆ ಕಸಿ ಘಟಕ ನಿರ್ಮಾಣವಾಗಿದೆ.ಖಾಸಗಿ ಆಸ್ಪತ್ರೆಗಳಲ್ಲಿ ₹ 30 ಲಕ್ಷದಿಂದ ₹ 50 ಲಕ್ಷ ವೆಚ್ಚವಾಗುವ ಕಸಿಯನ್ನು ಸಂಸ್ಥೆಯಲ್ಲಿ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್) ಕುಟುಂಬದವರಿಗೆ ಬಹುತೇಕ ಉಚಿತವಾಗಿ ಒದಗಿಸಲಾಗುತ್ತದೆ.

ಸಂಸ್ಥೆಯ ಆವರಣದಲ್ಲಿ 42 ಹಾಸಿಗೆಗಳ ಸಾಮರ್ಥ್ಯದ ವೈದ್ಯಕೀಯ ಐಸಿಯು ಘಟಕ ನಿರ್ಮಾಣವಾಗಲಿದ್ದು, ಇದರ ಭೂಮಿ ಪೂಜೆ ಮಂಗಳವಾರ ನಡೆಯಲಿದೆ. ₹ 4 ಕೋಟಿ ವೆಚ್ಚದಲ್ಲಿ ಇದನ್ನು ರಾಜಶೇಖರ್ ಎಂಬುವವರು ನಿರ್ಮಿಸಿಕೊಡುತ್ತಿದ್ದಾರೆ.

‘ರೋಗಿಗಳನ್ನು ರಕ್ತದ ಕ್ಯಾನ್ಸರ್‌ನಿಂದ ಮುಕ್ತ ಮಾಡಲು ಅಸ್ಥಿಮಜ್ಜೆ ಕಸಿ ಸಹಾಯಕ. ಆದರೆ, ಸಂಕೀರ್ಣ ಚಿಕಿತ್ಸೆಗೆ ರೋಗಿಗಳು ಖಾಸಗಿ ಆಸ್ಪತ್ರೆಗಳನ್ನೇ ಹೆಚ್ಚಾಗಿ ಅವಲಂಬಿಸಬೇಕಾಗಿದೆ. ಈಗ ಸಂಸ್ಥೆಯಲ್ಲಿಯೇ ಈ ಕಸಿಯನ್ನು ಒದಗಿಸಲಾಗುತ್ತಿದೆ. ಅಂತರರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನದ ಪ್ರಯುಕ್ತಇದಕ್ಕೆ ಚಾಲನೆ ನೀಡಲಾಗುತ್ತಿದೆ’ ಎಂದು ಸಂಸ್ಥೆ ನಿರ್ದೇಶಕ ಡಾ.ಸಿ. ರಾಮಚಂದ್ರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.