ADVERTISEMENT

ಕ್ಯಾನ್ಸರ್ ಪೀಡಿತರ ಕೈಹಿಡಿದ ‘ಯಶಸ್ವಿನಿ’

ಒಂದು ವರ್ಷದಲ್ಲಿ ₹5.20 ಕೋಟಿ ವೆಚ್ಚದಲ್ಲಿ 1,796 ಮಂದಿಗೆ ಚಿಕಿತ್ಸೆ

ವರುಣ ಹೆಗಡೆ
Published 15 ಮೇ 2024, 23:11 IST
Last Updated 15 ಮೇ 2024, 23:11 IST
<div class="paragraphs"><p>ಕ್ಯಾನ್ಸರ್ (ಸಾಂದರ್ಭಿಕ ಚಿತ್ರ)</p></div>

ಕ್ಯಾನ್ಸರ್ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ರಾಜ್ಯ ಸರ್ಕಾರವು ‘ಯಶಸ್ವಿನಿ ಯೋಜನೆ’ಯಡಿ ಕಿಮೊಥೆರಪಿಯಂತಹ ಚಿಕಿತ್ಸೆಗಳನ್ನು ಸೇರ್ಪಡೆ ಮಾಡಿರುವುದರಿಂದಾಗಿ ಕ್ಯಾನ್ಸರ್ ಪೀಡಿತರ ಮೇಲಿನ ಆರ್ಥಿಕ ಭಾರ ಇಳಿದಿದ್ದು, ಒಂದು ವರ್ಷದ ಅವಧಿಯಲ್ಲಿ 1,796 ಮಂದಿ ₹5.20 ಕೋಟಿ ವೆಚ್ಚದಲ್ಲಿ ಕ್ಯಾನ್ಸರ್‌ ರೋಗಕ್ಕೆ ಚಿಕಿತ್ಸೆ ಪಡೆದಿದ್ದಾರೆ. 

ಸಹಕಾರಿ ಇಲಾಖೆಯ ಮೂಲಕ 2003ರಲ್ಲಿ ಆರಂಭಗೊಂಡಿದ್ದ ‘ಯಶಸ್ವಿನಿ’ ಯೋಜನೆಯನ್ನು 2018ರ ಮೇ 31ರಂದು ಸ್ಥಗಿತಗೊಳಿಸಿ, ಆರೋಗ್ಯ ಕರ್ನಾಟಕ ಯೋಜನೆಯೊಂದಿಗೆ ವಿಲೀನಗೊಳಿಸಲಾಗಿತ್ತು. ಯೋಜನೆಯ ಮಹತ್ವ ಮನಗಂಡ ಸರ್ಕಾರ, 2023ರ ಜನವರಿಯಲ್ಲಿ ‘ಯಶಸ್ವಿನಿ ಸಹಕಾರಿ ಸದಸ್ಯರ ಆರೋಗ್ಯ ರಕ್ಷಣಾ ಟ್ರಸ್ಟ್‌’ ಮೂಲಕ ಯೋಜನೆಗೆ ಮರುಚಾಲನೆ ನೀಡಿತ್ತು. ಈ ವೇಳೆ ಕಿಮೊಥೆರಪಿ, ಸರ್ಜಿಕಲ್ ಆಂಕೊಲಾಜಿ ಹಾಗೂ ರೇಡಿಯೊಥೆರಪಿ ವಿಭಾಗದಿಂದ 261 ಚಿಕಿತ್ಸೆಗಳನ್ನು ಅಳವಡಿಸಿಕೊಳ್ಳಲಾಗಿದೆ. ಇದರಿಂದಾಗಿ ಯೋಜನೆಯಡಿ ಬರುವ ಕ್ಯಾನ್ಸರ್ ಪೀಡಿತರು ನೆಟ್ವರ್ಕ್ ಆಸ್ಪತ್ರೆಗಳಲ್ಲಿ ದುಬಾರಿ ವೆಚ್ಚದ ಕ್ಯಾನ್ಸರ್ ಚಿಕಿತ್ಸೆಯನ್ನೂ ಪಡೆದುಕೊಂಡಿದ್ದಾರೆ. 

ADVERTISEMENT

ಜನವರಿ 2023ರಿಂದ ಜನವರಿ 2024ರ ಅವಧಿಯಲ್ಲಿ ಕಿಮೊಥೆರಪಿ ವಿಭಾಗದಲ್ಲಿ ಒಟ್ಟು ₹1.43 ಕೋಟಿ ವೆಚ್ಚದಲ್ಲಿ 1,097 ಮಂದಿಗೆ ಚಿಕಿತ್ಸೆ ಒದಗಿಸಲಾಗಿದೆ. ರೇಡಿಯೊಥೆರಪಿ ವಿಭಾಗದಲ್ಲಿ ₹1.87 ಕೋಟಿ ವೆಚ್ಚದಲ್ಲಿ 228 ಮಂದಿಗೆ ಹಾಗೂ ಸರ್ಜಿಕಲ್ ಆಂಕೊಲಾಜಿ ವಿಭಾಗದಲ್ಲಿ ₹1.90 ಕೋಟಿ ವೆಚ್ಚದಲ್ಲಿ 411 ಮಂದಿಗೆ ಚಿಕಿತ್ಸೆ ನೀಡಲಾಗಿದೆ. 

ನೇರವಾಗಿ ತೆರಳಿ ಚಿಕಿತ್ಸೆ: ‘ಯಶಸ್ವಿನಿ’ ಯೋಜನೆಯಡಿ ಗರಿಷ್ಠ ₹ 5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ಪಡೆಯಬಹುದಾಗಿದೆ. ‘ಆಯುಷ್ಮಾನ್ ಭಾರತ–ಆರೋಗ್ಯ ಕರ್ನಾಟಕ’ ಯೋಜನೆಯಡಿಯೂ ಇಷ್ಟೇ ಮೊತ್ತದ ಚಿಕಿತ್ಸೆ ಪಡೆಯಲು ಅವಕಾಶವಿದೆ. ಆದರೆ, ವ್ಯಕ್ತಿಯು ಮೊದಲು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ, ಅಲ್ಲಿ ಚಿಕಿತ್ಸೆ ಲಭ್ಯವಿರದಿದ್ದಲ್ಲಿ ಮಾತ್ರ ಶಿಫಾರಸು ಆಧಾರದಲ್ಲಿ ಬೇರೆ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಳ್ಳಬೇಕಾಗುತ್ತದೆ. ಆದರೆ, ಯಶಸ್ವಿನಿ ಯೋಜನೆಯಡಿ ವ್ಯಕ್ತಿಯು ನೆಟ್ವರ್ಕ್ ಆಸ್ಪತ್ರೆಗಳಿಗೆ ನೇರವಾಗಿ ತೆರಳಿ, ಚಿಕಿತ್ಸೆ ಪಡೆದುಕೊಳ್ಳಬಹುದು. ಇದರಿಂದಾಗಿ ಯೋಜನೆಯ ಫಲಾನುಭವಿಗಳಿಗೆ ಚಿಕಿತ್ಸೆ ಸಾಧ್ಯವಾಗುತ್ತಿದೆ. 

‘ಯೋಜನೆಯಡಿ ಕ್ಯಾನ್ಸರ್‌ಗೆ ಸಂಬಂಧಿಸಿದ ಚಿಕಿತ್ಸೆಗಳನ್ನೂ ಅಳವಡಿಸಿರುವುದರಿಂದ ಕ್ಯಾನ್ಸರ್‌ ಪೀಡಿತರಿಗೆ ಚಿಕಿತ್ಸೆ ಸುಲಭವಾಗಿದೆ. ₹5 ಲಕ್ಷದವರೆಗೆ ನಗದು ರಹಿತ ಚಿಕಿತ್ಸೆ ಒದಗಿಸಲಾಗುತ್ತದೆ. ಬಹುತೇಕ ಕ್ಯಾನ್ಸರ್ ಪೀಡಿತರಿಗೆ ರೇಡಿಯೊಥೆರಪಿ ಅಗತ್ಯವಿರುತ್ತದೆ. ಇನ್ನಷ್ಟು ಆಸ್ಪತ್ರೆಗಳನ್ನು ಯೋಜನೆಯಡಿ ತರಲು ಕ್ರಮವಹಿಸಲಾಗಿದೆ’ ಎಂದು ಸಹಕಾರ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.