ADVERTISEMENT

ಬೆಂಗಳೂರು: ಮೆಜೆಸ್ಟಿಕ್‌ನಲ್ಲಿ ಹೊತ್ತಿ ಉರಿದ ಕಾರು, ಚಾಲಕ ಅಪಾಯದಿಂದ ಪಾರು

ವಿಡಿಯೊ ಸುದ್ದಿ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2020, 1:37 IST
Last Updated 1 ಮಾರ್ಚ್ 2020, 1:37 IST
ಕಾರು ಸುಟ್ಟು ಕರಕಲಾಗಿರುವುದು
ಕಾರು ಸುಟ್ಟು ಕರಕಲಾಗಿರುವುದು   

ಬೆಂಗಳೂರು: ನಗರದ ಮೆಜೆಸ್ಟಿಕ್‌ನಲ್ಲಿ ಭಾನುವಾರ ಮುಂಜಾನೆ ಮಾರುತಿ ರಿಡ್ಜ್‌ ಕಾರೊಂದು ಏಕಾಏಕಿ ಬೆಂಕಿ ಹೊತ್ತಿಕೊಂಡು ಉರಿಯಿತು. ಅದೃಷ್ಟವಶಾತ್, ಚಾಲಕ ಅಪಾಯದಿಂದ ಪಾರಾದರು. ಮುಂಜಾನೆ 5.30ರ ಸುಮಾರಿಗೆ ನಡೆದ ಈ ದುರ್ಘಟನೆ ಕೆಲಕಾಲ ಆತಂಕ ಸೃಷ್ಟಿಸಿತು.

ಸಾಗುತ್ತಿದ್ದ ಕಾರಿನ ಹಿಂಭಾಗದಲ್ಲಿ ಏಕಾಏಕಿ ಹೊಗೆ ಕಾಣಿಸಿಕೊಂಡಿತು. ಚಾಲಕ ಮಂಜು ಅವರು ‘ನಮ್ಮ ಮೆಟ್ರೊ’ ನಿಲ್ದಾಣದ ಪಶ್ಚಿಮ ದಿಕ್ಕಿನ ಪ್ರವೇಶ ದ್ವಾರದ ಬಳಿ ಕಾರನ್ನು ನಿಲ್ಲಿಸಿದರು. ಅರೆಕ್ಷಣದಲ್ಲೇ ಬೆಂಕಿ ಜ್ವಾಲೆ ಕಾಣಿಸಿಕೊಂಡಿತು. ಬಾಟಲಿ ನೀರು ಸುರಿದು ಬೆಂಕಿ ಆರಿಸಲು ಯತ್ನಿಸಿದರೂ ಪ್ರಯೋಜನಕ್ಕೆ ಬರಲಿಲ್ಲ. ಸ್ಥಳಕ್ಕೆ ಬಂದ ವಾಯು ವಜ್ರ ಬಸ್‌ನ ಚಾಲಕರೊಬ್ಬರು ತಮ್ಮ ಬಸ್‌ನಲ್ಲಿದ್ದ ಅಗ್ನಿಶಾಮಕ ಸಿಲಿಂಡರ್ ನಿಂದ ಬೆಂಕಿ ನಂದಿಸಲು ಯತ್ನಿಸಿದರು. ಅಷ್ಟರಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಕಾರನ್ನು ಆವರಿಸಿಕೊಂಡಿತ್ತು.

ಅಗ್ನಿಶಾಮಕ ವಾಹನ ಸ್ಥಳಕ್ಕೆ ತಲುಪುವಷ್ಟರಲ್ಲಿ ಕಾರು ಧಗಧಗನೆ ಉರಿಯುತ್ತಿತ್ತು. ಅವರು ಬೆಂಕಿ ನಂದಿಸಿದರಾದರೂ ಅಷ್ಟರಲ್ಲಿ ಕಾರು ಸುಟ್ಟು ಕರಕಲಾಗಿತ್ತು.

ADVERTISEMENT

ಕಾರು ( KA 03 MP 7818) ಜಯನಗರದ ರಾಘವೆಂದ್ರಸ್ವಾಮಿ ಮಠದ ಬಳಿಯ ನಿವಾಸಿ ಶ್ರೀನಿವಾಸ ಅವರಿಗೆ ಸೇರಿದ್ದು. ‘ಮಾಲೀಕರ ಕುಟುಂಬಸ್ಥರೊಬ್ಬರನ್ನು ಬಿಟ್ಟು ಹಿಂದಕ್ಕೆ ಬರುವಾಗ ಕಾರಿನೊಳಗೆ ಹೊಗೆ ಕಾಣಿಸಿಕೊಂಡಿತು. ಬೆಂಕಿ ನಂದಿಸಲು ಪ್ರಯತ್ನಿಸಿದೆ. ಆದರೆ ಆಗಲಿಲ್ಲ’ ಎಂದು ಚಾಲಕ ಮಂಜು 'ಪ್ರಜಾವಾಣಿಗೆ ತಿಳಿಸಿದರು.

‘ನಾಲ್ಕೈದು ನಿಮಿಷಗಳಲ್ಲೇ ಕಾರು ಸುಟ್ಟು ಕರಕಲಾಯಿತು. ಹೊಗೆ ಕಾಣಿಸಿಕೊಡ ತಕ್ಷಣವೇ ಚಾಲಕ ಹೊರಗಿಳಿದಿದ್ದರಿಂದ ಅವರ ಜೀವಕ್ಕೇನೂ ಅಪಾಯ ಆಗಲಿಲ್ಲ’ ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.