ADVERTISEMENT

ಜಾತಿನಿಂದನೆ ಆರೋಪ ಪ್ರಕರಣ: ಮುನಿರತ್ನ ವಿರುದ್ಧ 590 ಪುಟಗಳ ಆರೋಪಪಟ್ಟಿ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2024, 23:53 IST
Last Updated 30 ನವೆಂಬರ್ 2024, 23:53 IST
ಮುನಿರತ್ನ
ಮುನಿರತ್ನ   

ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಜಾತಿನಿಂದನೆ, ಜೀವ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವಿಶೇಷ ತನಿಖಾ ತಂಡವು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ 590 ಪುಟಗಳ ಆರೋಪಪಟ್ಟಿ ಸಲ್ಲಿಸಿದೆ.

ಗುತ್ತಿಗೆದಾರ ವೇಲುನಾಯ್ಕರ್ ನೀಡಿದ್ದ ದೂರಿನ ಅನ್ವಯ ಸೆಪ್ಟೆಂಬರ್ 13ರಂದು ಮುನಿರತ್ನ ವಿರುದ್ಧ ವೈಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಬಳಿಕ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ವರ್ಗಾವಣೆ ಮಾಡಿ ಆದೇಶಿಸಿತ್ತು.

ತನಿಖೆ ನಡೆಸಿದ ಸಿಐಡಿಯ ಎಸ್ಐಟಿ ತಂಡ 53 ಸಾಕ್ಷಿಗಳ ವಿಚಾರಣೆ ನಡೆಸಿ, ಆರೋಪಿ ವಿರುದ್ಧ 157 ದಾಖಲೆಗಳನ್ನು ಒಳಗೊಂಡ 590 ಪುಟಗಳ ಆರೋಪ ಪಟ್ಟಿ ಸಲ್ಲಿಸಿದೆ. ಮೂವರು ಪ್ರತ್ಯಕ್ಷದರ್ಶಿ ಸಾಕ್ಷಿದಾರರು ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದಾರೆ.

ADVERTISEMENT

ಜಾತಿನಿಂದನೆ ಮಾಡಿರುವ ಬಗ್ಗೆ ದೂರುದಾರ ವೇಲುನಾಯ್ಕರ್ ಸಲ್ಲಿಸಿದ್ದ ಆಡಿಯೊ ಮಾದರಿ ಹಾಗೂ ಮುನಿರತ್ನ ಅವರ ಧ್ವನಿ ಮಾದರಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ತಜ್ಞರಿಂದ ವರದಿ ಪಡೆಯಲಾಗಿದೆ. ಆರೋಪಿಯ ಧ್ವನಿ ಮಾದರಿ ಹಾಗೂ ಫೋನ್ ಸಂಭಾಷಣೆ ಆಡಿಯೊದಲ್ಲಿರುವ ಧ್ವನಿಗೆ ಹೋಲಿಕೆಯಾಗಿರುವುದು ಎಫ್​ಎಸ್​ಎಲ್ ತಜ್ಞರ ವರದಿಯಿಂದ ದೃಢಪಟ್ಟಿದೆ.

ಸಂಗ್ರಹಿಸಿದ ಎಲ್ಲ ದಾಖಲೆಗಳು, ಸಾಕ್ಷಿದಾರರ ಹೇಳಿಕೆಗಳು ಹಾಗೂ ವೈಜ್ಞಾನಿಕ ಸಾಕ್ಷ್ಯಾಧಾರಗಳಿಂದ ಮುನಿರತ್ನ ಅವರು ಜಾತಿ ನಿಂದನೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿರುವ ಬಗ್ಗೆ ಮತ್ತು ಜಾತಿ ಜಾತಿಗಳ ನಡುವೆ ವೈಷಮ್ಯ ಉಂಟುಮಾಡಿರುವ ಬಗ್ಗೆ ಆರೋಪ ಸಾಬೀತಾಗಿದೆ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.