ಬೆಂಗಳೂರು: ‘ನಗರದಲ್ಲಿರುವ ಪರಿಶಿಷ್ಟ ಜಾತಿಗಳಲ್ಲಿ ಮಾದಿಗ ಸಮುದಾಯದವರ ಸಂಖ್ಯೆ ಹೆಚ್ಚಿದೆ. ಆದರೆ, ಬಹುತೇಕರು ಪೌರಕಾರ್ಮಿಕರಾಗಿರುವುದರಿಂದ ಕೆಲಸಕ್ಕೆ ಹೋಗುತ್ತೀರಿ. ಸಮೀಕ್ಷೆ ವೇಳೆ ಮಾಹಿತಿ ನೀಡುವುದಿಲ್ಲ. ಈ ಬಾರಿ ಹೀಗಾಗದಂತೆ ಎಚ್ಚರ ವಹಿಸಿ’ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಸಲಹೆ ತಿಳಿಸಿದರು.
ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕುರಿತು ಕರ್ನಾಟಕ ಮಾದರ ಮಹಾಸಭಾ ಶನಿವಾರ ಹಮ್ಮಿಕೊಂಡಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು.
‘ನಮ್ಮ ಸಮುದಾಯ ಹೆಚ್ಚಿದೆ ಎಂಬುದನ್ನು ಬಾಯಿ ಮಾತಲ್ಲಿ ಹೇಳಿದರೆ ಸಾಲದು ನಿಖರವಾಗಿ ನಮೂದಿಸಬೇಕು. ನಾಗಮೋಹನದಾಸ್ ಆಯೋಗ ನಡೆಸಿದ ಸಮೀಕ್ಷೆಯ ವೇಳೆ ಬಹಳಷ್ಟು ಜನರು ಹೊರಗುಳಿದಿದ್ದರು. ಈ ಬಾರಿ ಹಾಗಾಗಬಾರದು’ ಎಂದು ಎಚ್ಚರಿಸಿದರು.
ಮಾಜಿ ಸಚಿವ ಎಚ್. ಆಂಜನೇಯ ಮಾತನಾಡಿ, ‘ಬೇರೆ ಸಮುದಾಯದವರು ನಮ್ಮನ್ನು ಕುಗ್ಗಿಸಲು ಪ್ರಯತ್ನಿಸುತ್ತಿದ್ದಾರೆ. ಇಂಥ ಸಮಯದಲ್ಲಿ ನಾವು ಸಮೀಕ್ಷೆಯಿಂದ ಹೊರಗುಳಿದರೆ ಅವರ ಪ್ರಯತ್ನಕ್ಕೆ ಸಹಕಾರ ನೀಡಿದಂತಾಗುತ್ತದೆ. ಇಲ್ಲದೇ ಇರುವುದನ್ನು ಬರೆಯಿಸುವುದು ಬೇಡ. ಆದರೆ, ಇರುವವರು ನಿಖರವಾಗಿ ಮಾಹಿತಿ ನೀಡಬೇಕು’ ಎಂದು ಸಲಹೆ ನೀಡಿದರು.
‘ಮತ್ತೆ ಆದಿ ಕರ್ನಾಟಕ (ಎ.ಕೆ.), ಆದಿ ದ್ರಾವಿಡ (ಎ.ಡಿ.), ಆದಿ ಆಂಧ್ರ (ಎ.ಎ.) ಎಂದು ನಮೂದಿಸಲು ಹೋಗಬೇಡಿ. ಹಾಗೆ ಬರೆಸಿದರೆ ಒಳಮೀಸಲಾತಿ ಸಿಗುವುದಿಲ್ಲ’ ಎಂದು ತಿಳಿಸಿದರು.
ಕೇಂದ್ರ ಮಾಜಿ ಸಚಿವ ಎ.ನಾರಾಯಣ ಸ್ವಾಮಿ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ, ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಗೋನಾಳ್ ಭೀಮಪ್ಪ, ನಿವೃತ್ತ ಐಎಎಸ್ ಅಧಿಕಾರಿಗಳಾದ ಬಿ.ಎಚ್. ಅನಿಲ್ ಕುಮಾರ್, ಬಾಬುರಾವ್ ಮುಡಬಿ, ಪೌರಕಾರ್ಮಿಕರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.