ADVERTISEMENT

ಬೆಂಗಳೂರು | ಕೆಥೋಲಿಕ್‌ ಧರ್ಮಪ್ರಾಂತ್ಯ: ಸಹಾಯಕ ಧರ್ಮಾಧ್ಯಕ್ಷರಿಗೆ ಧರ್ಮದೀಕ್ಷೆ

ಬೆಂಗಳೂರು ಧರ್ಮಪ್ರಾಂತ್ಯದಲ್ಲಿ ಭಕ್ತಿ–ಭಾವದಿಂದ ನಡೆದ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 14:24 IST
Last Updated 24 ಆಗಸ್ಟ್ 2024, 14:24 IST
ಬೆಂಗಳೂರು ಧರ್ಮಪ್ರಾಂತ್ಯದ ನೂತನ ಸಹಾಯಕ ಧರ್ಮಾಧ್ಯಕ್ಷರಾಗಿ ಆರೋಕ್ಯರಾಜ್ ಸತೀಶ್ ಕುಮಾರ್ ಮತ್ತು ಜೋಸೆಫ್ ಸೂಸೈನಾದನ್ ಅವರು ಶನಿವಾರ ಧರ್ಮದೀಕ್ಷೆ ಪಡೆದರು. ಆರ್ಚ್‌ಬಿಷಪ್‌ ಪೀಟರ್‌ ಮಚಾಡೊ ಉಪಸ್ಥಿತರಿದ್ದರು -ಪ್ರಜಾವಾಣಿ ಚಿತ್ರ
ಬೆಂಗಳೂರು ಧರ್ಮಪ್ರಾಂತ್ಯದ ನೂತನ ಸಹಾಯಕ ಧರ್ಮಾಧ್ಯಕ್ಷರಾಗಿ ಆರೋಕ್ಯರಾಜ್ ಸತೀಶ್ ಕುಮಾರ್ ಮತ್ತು ಜೋಸೆಫ್ ಸೂಸೈನಾದನ್ ಅವರು ಶನಿವಾರ ಧರ್ಮದೀಕ್ಷೆ ಪಡೆದರು. ಆರ್ಚ್‌ಬಿಷಪ್‌ ಪೀಟರ್‌ ಮಚಾಡೊ ಉಪಸ್ಥಿತರಿದ್ದರು -ಪ್ರಜಾವಾಣಿ ಚಿತ್ರ   

ಬೆಂಗಳೂರು: ಕೆಥೋಲಿಕ್‌ ಬೆಂಗಳೂರು ಧರ್ಮಪ್ರಾಂತ್ಯದ ನೂತನ ಸಹಾಯಕ ಧರ್ಮಾಧ್ಯಕ್ಷರಿಗೆ ಶನಿವಾರ ಧರ್ಮದೀಕ್ಷೆ ನೀಡಲಾಯಿತು.

ಸಹಾಯಕ ಧರ್ಮಾಧ್ಯಕ್ಷರಾದ ಆರೋಕ್ಯರಾಜ್ ಸತೀಶ್ ಕುಮಾರ್ ಮತ್ತು ಜೋಸೆಫ್ ಸೂಸೈನಾದನ್ ಅವರನ್ನು ಆರ್ಚ್‌ ಬಿಷಪ್‌ ಪೀಟರ್‌ ಮಚಾಡೊ ನೇತೃತ್ವದಲ್ಲಿ 400 ಧರ್ಮಗುರುಗಳ ಮೆರವಣಿಗೆಯಲ್ಲಿ ಸೇಂಟ್‌ ಫ್ರಾನ್ಸಿಸ್‌ ಕ್ಸೇವಿಯರ್‌ ಕೆಥಡ್ರಲ್‌ ದೇವಾಲಯಕ್ಕೆ ಕರೆ ತರಲಾಯಿತು.

ಭಕ್ತಿ– ಭಾವದಿಂದ ಸಾರ್ವಜನಿಕರು ಪಾಲ್ಗೊಂಡರು. ಬಳಿಕ ಮೈಸೂರು ಧರ್ಮಕ್ಷೇತ್ರದ ಆಡಳಿತಾಧಿಕಾರಿ ಬರ್ನಾಡ್‌ ಮೋರಸ್‌, ಚಿಕ್ಕಮಗಳೂರು ಧರ್ಮಾಧ್ಯಕ್ಷ ತೋಮಸಪ್ಪ ಅಂತೋಣಿಸ್ವಾಮಿ, ಬೆಂಗಳೂರು ಧರ್ಮಾಧ್ಯಕ್ಷ ಪೀಟರ್‌ ಮಚಾಡೊ ಅವರು ಧರ್ಮದೀಕ್ಷೆ ನೆರವೇರಿಸಿದರು.

ADVERTISEMENT

ಕೆಥೋಲಿಕ್‌ ಧರ್ಮಸಭೆಯ ಸಂಪ್ರದಾಯದಲ್ಲಿ ಒಳ್ಳೆಯ ಕುರುಬನ ಪಾತ್ರದ ಕುರಿತು ಆರ್ಚ್‌ ಬಿಷಪ್ ಪೀಟರ್ ಮಚಾಡೊ, ಉಡುಪಿ ಧರ್ಮಾಧ್ಯಕ್ಷ ಜೆರಾಲ್ಟ್ ಐಸಾಕ್ ಲೋಬೊ, ತಮಿಳುನಾಡಿನ ಧರ್ಮಪುರಿ ಧರ್ಮಾಧ್ಯಕ್ಷ ಲಾರೆನ್ಸ್ ಪಿಯುಸ್ ವಿವರಿಸಿದರು. ಬೈಬಲ್ ಗ್ರಂಥದಲ್ಲಿ ಕುರುಬನಿಗೆ ನೀಡಿರುವ ಪ್ರಾಮುಖ್ಯವನ್ನು ತಿಳಿಸಿಕೊಟ್ಟರು.

‘ನೂತನ ಸಹಾಯಕ ಧರ್ಮಾಧ್ಯಕ್ಷರನ್ನು ಅವರ ಭಾಷಾ ಸಾಮರ್ಥ್ಯ, ಬೌದ್ಧಿಕ ಸಾಮರ್ಥ್ಯ ಅಥವಾ ಅವರ ಆಡಳಿತಾತ್ಮಕ ಸಾಮರ್ಥ್ಯದ ಆಧಾರದ ಮೇಲೆ ಆರಿಸಲಾಗಿಲ್ಲ. ಅವರ ದೀನತೆ ಹಾಗೂ ಸರಳತೆಯ ಆಧಾರದ ಮೇಲೆ ಆರಿಸಿಕೊಳ್ಳಲಾಗಿದೆ. ಭಾಷೆ, ಸಂಸ್ಕೃತಿ, ಸಂಪ್ರದಾಯಕ್ಕಿಂತ ಮಿಗಿಲಾದ ಸೇವೆಯನ್ನು ನಿಮಗೆ ನೀಡಲಿದ್ದಾರೆ’ ಎಂದು ಪೀಟರ್ ಮಚಾಡೊ ವಿವರಿಸಿದರು.

ಬಲಿಪೂಜೆಯಲ್ಲಿ ಸಂಗ್ರಹವಾದ ಕಾಣಿಕೆಯನ್ನು ಕೇರಳದ ವಯನಾಡಿನ ಭೂಕುಸಿತದ ಸಂತ್ರಸ್ತರಿಗೆ ನೀಡಲು ನಿರ್ಧರಿಸಲಾಯಿತು.

ಕಾರ್ಯಕ್ರಮದಲ್ಲಿ ದೇಶದ 24 ಆರ್ಚ್‌ ಬಿಷಪ್‌ಗಳು, ಬಿಷಪ್‌ಗಳು, 500 ಧರ್ಮಗುರುಗಳು, ಸನ್ಯಾಸಿನಿಯರು, 6,000ಕ್ಕೂ ಅಧಿಕ ಭಕ್ತರು ಭಾಗವಹಿಸಿದ್ದರು. ಸನ್ಮಾನ ಕಾರ್ಯಕ್ರಮದಲ್ಲಿ ರಾಯಭಾರಿ ಪ್ರತಿನಿಧಿ ಅಲ್ಬರ್ಟೊ ನಪಾಲಿಟನೊ ಸಂದೇಶ ನೀಡಿದರು. ಬೆಂಗಳೂರು ಧರ್ಮಕ್ಷೇತ್ರದ ಸಾರ್ವಜನಿಕ ಸಂಪರ್ಕಾಧಿಕಾರಿ ಜೆ.ಎ. ಕಾಂತರಾಜ್‌ ಸನ್ಮಾನ ಸಂದೇಶ ನೀಡಿದರು.

ಬಲಿಪೂಜೆಯ ಕಾಣಿಕೆ ವಯನಾಡ್‌ ಸಂತ್ರಸ್ತರಿಗೆ ನೀಡಲು ನಿರ್ಧಾರ ನೂತನ ಸಹಾಯಕ ಧರ್ಮಾಧ್ಯಕ್ಷ ಮೆರವಣಿಗೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.