‘ಕಾವೇರಿ ಆರತಿ’ ಕಾರ್ಯಕ್ರಮಕ್ಕಾಗಿ ಸ್ಯಾಂಕಿ ಕೆರೆಯಲ್ಲಿ ಸಿದ್ದತೆ ನಡೆಸುತ್ತಿರುವುದು
ಪ್ರಜಾವಾಣಿ ಚಿತ್ರ: ಪುಷ್ಕರ್ ಕೆ.ವಿ.
ಬೆಂಗಳೂರು: ಉದ್ಯಾನ ನಗರಿಯ ಮುಕ್ಕಾಲು ಪಾಲು ಜನರಿಗೆ ಜೀವ ಜಲ ಪೂರೈಸುವ ಕಾವೇರಿ ನದಿಗೆ ಗೌರವ ಸಲ್ಲಿಸುವುದಕ್ಕಾಗಿ ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ನಗರದ ಸ್ಯಾಂಕಿ ಕೆರೆಯಲ್ಲಿ 'ಕಾವೇರಿ ಆರತಿ' ಕಾರ್ಯಕ್ರಮವನ್ನು ಆಯೋಜಿಸುತ್ತಿದೆ
ಇದೇ 21 ರಂದು ಸಂಜೆ ಸ್ಯಾಂಕಿ ಕೆರೆಯ ದಂಡೆಯ ಮೇಲೆ 'ಕಾವೇರಿ ಆರತಿ' ನಡೆಯಲಿದೆ. ಬೆಂಗಳೂರು ಜಲಮಂಡಳಿ ಕಾರ್ಯಕ್ರಮ ಆಯೋಜಿಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಭಾನುವಾರ ಸ್ಯಾಂಕಿ ಕೆರೆಯ ಆವರಣದಲ್ಲಿ ಪೂರ್ವ ಸಿದ್ಧತಾ ಸಭೆಯನ್ನು ನಡೆಸಿದೆ.
ಉತ್ತರ ಪ್ರದೇಶದ ವಾರಾಣಸಿಯಲ್ಲಿ ನಡೆಯಲಿರುವ 'ಗಂಗಾರತಿ' ಮಾದರಿಯಲ್ಲೇ ಈ ಕಾರ್ಯಕ್ರಮವೂ ನಡೆಯಲಿದ್ದು, ಈ ಧಾರ್ಮಿಕ ಕಾರ್ಯಕ್ರಮಕ್ಕಾಗಿ ಉತ್ತರ ಪ್ರದೇಶದಿಂದ ಪುರೋಹಿತರನ್ನು ಕರೆಸಲು ತೀರ್ಮಾನಿಸಲಾಗಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ನೌಕರರ ಕುಟುಂಬಗಳು ಹಾಗೂ ಸಾರ್ವಜನಿಕರು ಸೇರಿ 10 ಸಾವಿರಕ್ಕೂ ಅಧಿಕ ಜನರು ಕಾವೇರಿ ಆರತಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾಗವಹಿಸುವ ಸಾಧ್ಯತೆ ಇದೆ.
ಕಾರ್ಯಕ್ರಮದ ಅಂಗವಾಗಿ ಮೆರವಣಿಗೆ ಮತ್ತು ವಿಶೇಷ ಪೂಜೆ ನಡೆಯಲಿದೆ. ನಂತರ ಭಾಗಮಂಡಲದಲ್ಲಿರುವ ಕಾವೇರಿ, ಕನ್ನಿಕಾ ಮತ್ತು ಸುಜ್ಯೋತಿ ನದಿಗಳ ಸಂಗಮ ತಾಣದಿಂದ ಸಂಗ್ರಹಿಸಿ ತರುವ ಪವಿತ್ರ ಜಲವನ್ನು ‘ತೀರ್ಥ’ವಾಗಿ ವಿತರಿಸಲಾಗುತ್ತದೆ.
ಕಾರ್ಯಕ್ರಮದಲ್ಲಿ ಲೇಸರ್ ಪ್ರದರ್ಶನ ಮತ್ತು ಲೈವ್ ಆರ್ಕೆಸ್ಟ್ರಾ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳಿರುತ್ತವೆ.
ಇದು ಒಂದು ಐತಿಹಾಸಿಕ ಕಾರ್ಯಕ್ರಮ’ ಎಂದು ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಕಾವೇರಿ ನದಿಯ ಉಪನದಿಯಾಗಿರುವ ವೃಷಭಾವತಿಯ ಉಗಮ ಸ್ಥಾನ ಸ್ಯಾಂಕಿ ಕೆರೆಯಾಗಿರುವ ಕಾರಣದಿಂದಲೂ ಕಾವೇರಿ ಆರತಿಗೆ ಈ ಕೆರೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
'ಈ ಕೆರೆ ಸಮೀಪದಲ್ಲಿ ಶ್ರೀಜಲಗಂಗಮ್ಮ ತಾಯಿ ದೇವಾಲಯವಿದೆ. ಇದು ವೃಷಭಾವತಿಯ ಉಗಮ ಸ್ಥಾನವೆಂದು ಗುರುತಿಸಲು ನಮ್ಮ ಪೂರ್ವಜರು ದೇವಾಲಯವನ್ನು ಇಲ್ಲಿ ಸ್ಥಾಪಿಸಿದ್ದಾರೆ. ಪ್ರತಿ ವರ್ಷ ಕಾವೇರಿ ಆರತಿಯನ್ನು ಇಲ್ಲಿ ನಡೆಸಲಾಗುತ್ತದೆ' ಎಂದು ರಾಮ್‌ಪ್ರಸಾದ್ ಮನೋಹರ್ ತಿಳಿಸಿದರು.
ವೃಷಭಾವತಿ ಉಗಮದ ಮೂಲದ ಬಗ್ಗೆ ಕೆಲವು ವಾದಗಳಿವೆ. ಕೆಲವು ಇತಿಹಾಸಕಾರರು ಬಸವನಗುಡಿಯ ನಂದಿ ಪಾದದಲ್ಲಿ ವೃಷಭಾವತಿ ಉಗಮಿಸುತ್ತದೆ ಎನ್ನುತ್ತಾರೆ. ಕೆಲವರು ಸ್ಯಾಂಕಿ ಕೆರೆಯಲ್ಲೇ ಉಗಮವಾಗುತ್ತದೆ ಎನ್ನುತ್ತಾರೆ.
ಈ ನಡುವೆ ಜಲಮಂಡಳಿ, ಗಾಳಿ ಆಂಜನೇಯಸ್ವಾಮಿ ದೇವಾಲಯದ ಬಳಿ ಕಾವೇರಿ ಆರತಿ ಕಾರ್ಯಕ್ರಮ ನಡೆಸಲು ಯೋಜಿಸಿತ್ತು. ಆದರೆ,ಜಾಗದ ಕೊರತೆ ಹಾಗೂ ಸಮೀಪದಲ್ಲೇ ಚರಂಡಿ ನೀರು ಹರಿಯುತ್ತಿರುವ ಕಾರಣರಿಂದ, ಆ ಯೋಜನೆಯನ್ನು ಕೈಬಿಡಲಾಯಿತು ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.