ಬೆಂಗಳೂರು: ಕಾವೇರಿ ಸಂಪರ್ಕ ಅಭಿಯಾನ ಸೇರಿದಂತೆ ಹಲವು ರೀತಿಯ ಜಾಗೃತಿ ಕಾರ್ಯಕ್ರಮಗಳೊಂದಿಗೆ ಆರು ತಿಂಗಳಲ್ಲಿ 13,887 ಸಾವಿರಕ್ಕೂ ಹೆಚ್ಚು ಕಾವೇರಿ ನೀರಿನ ಹೊಸ ಸಂಪರ್ಕಗಳನ್ನು ಬೆಂಗಳೂರು ಜಲಮಂಡಳಿ ಮಂಜೂರು ಮಾಡಿದೆ.
ಕಳೆದ ನವೆಂಬರ್‌ನಿಂದ ಈ ಏಪ್ರಿಲ್‌ವರೆಗೆ 39,866 ಅರ್ಜಿಗಳು ಸಲ್ಲಿಕೆಯಾಗಿವೆ. 31 ಸಾವಿರಕ್ಕೂ ಹೆಚ್ಚು ಮಂದಿಗೆ ಡಿಮ್ಯಾಂಡ್ ನೋಟ್ ವಿತರಿಸಲಾಗಿದೆ. ವಿವಿಧ ಕಾರಣಗಳಿಂದ ನಾಲ್ಕು ಸಾವಿರದಷ್ಟು ಅರ್ಜಿಗಳನ್ನು ಬಾಕಿ ಇರಿಸಲಾಗಿದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ನಾಲ್ಕು ವಲಯಗಳ ಪೈಕಿ ದಕ್ಷಿಣ ವಲಯದಲ್ಲಿ ಕಾವೇರಿ ನೀರಿನ ಹೊಸ ಸಂಪರ್ಕ ಪಡೆಯಲು 14 ಸಾವಿರಕ್ಕೂ ಹೆಚ್ಚು ನಾಗರಿಕರು ಅರ್ಜಿ ಸಲ್ಲಿಸಿದ್ದಾರೆ. 12 ಸಾವಿರ ಮನೆಗಳಿಗೆ ಡಿಮ್ಯಾಂಡ್ ನೋಟ್ ನೀಡಿದ್ದು, ಶೇ 50ರಷ್ಟು ಮನೆಗಳಿಗೆ ನೀರಿನ ಸಂಪರ್ಕ ನೀಡಲಾಗಿದೆ.
ಪೂರ್ವ ವಲಯದಲ್ಲಿ 12 ಸಾವಿರ ಅರ್ಜಿ ಸಲ್ಲಿಕೆಯಾಗಿವೆ. ಎರಡು ಸಾವಿರ ಮನೆಗಳಿಗೆ ಸಂಪರ್ಕ ನೀಡಲಾಗಿದೆ. ಪಶ್ಚಿಮ ವಲಯದಲ್ಲಿ 10 ಸಾವಿರಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಮೂರು ಸಾವಿರ ಮನೆಗಳಿಗೆ ನೀರಿನ ಸಂಪರ್ಕ ಕೊಡಲಾಗಿದೆ.
ದಕ್ಷಿಣ ವಲಯ ಮುಂದು: ಅರ್ಜಿ ಸಲ್ಲಿಕೆಯಲ್ಲಷ್ಟೇ ಅಲ್ಲದೇ, ನೀರಿನ ಸಂಪರ್ಕ ನೀಡುವುದರಲ್ಲಿ, ಶುಲ್ಕ ಸಂಗ್ರಹಿಸುವಲ್ಲಿ ದಕ್ಷಿಣ ವಲಯ ಮುಂದಿದೆ. ಆರು ತಿಂಗಳಲ್ಲಿ ನಾಲ್ಕು ವಲಯಗಳಿಂದ ಕಾವೇರಿ ನೀರು ಸಂಪರ್ಕದ ಪ್ರೊರೇಟಾ ಶುಲ್ಕ ₹210 ಕೋಟಿಯಷ್ಟು ಸಂಗ್ರಹವಾಗಿದೆ. ಇದರಲ್ಲಿ ₹119.76 ಕೋಟಿ ದಕ್ಷಿಣವಲಯ ಒಂದರಲ್ಲೇ ಸಂಗ್ರಹವಾಗಿದೆ. ಈ ವಲಯದಲ್ಲಿ 6401 ನೀರಿನ ಸಂಪರ್ಕಗಳನ್ನು ನೀಡಲಾಗಿದೆ ಎಂದು ಜಲಮಂಡಳಿ ಸಿಬ್ಬಂದಿ ತಿಳಿಸಿದರು.
ಸಣ್ಣ ಮನೆಗಳಿಗೆ ‘ಕಂತು‘ ಸೌಲಭ್ಯ
ಕಾವೇರಿ ನೀರಿನ ಹೊಸ ಸಂಪರ್ಕದ ‘ಪ್ರೊರೇಟಾ’ ಶುಲ್ಕವನ್ನು ಸಮಾನ ಕಂತುಗಳಲ್ಲಿ (ಇಎಂಐ) ಪಾವತಿಸಲು ಜಲಮಂಡಳಿ ಯೋಜನೆ ರೂಪಿಸಿದ್ದು ಶೀಘ್ರದಲ್ಲೇ ಅದು ಅನುಷ್ಠಾನಗೊಳ್ಳಲಿದೆ. ಪ್ರಸ್ತುತ 600 ಚ.ಅಡಿ ವಿಸ್ತೀರ್ಣದಲ್ಲಿ ಮನೆ ನಿರ್ಮಿಸಿಕೊಂಡವರಿಗೆ (ಸಣ್ಣ ನಿವೇಶನದಾರರಿಗೆ) ಮಾತ್ರ ಕಳೆದ ಕಂತುಗಳಲ್ಲಿ ಶುಲ್ಕ ಪಾವತಿಸುವ ಸೌಲಭ್ಯ ನೀಡಲಾಗಿದೆ. ಇಷ್ಟು ಸಣ್ಣ ವಿಸ್ತೀರ್ಣದಲ್ಲಿ ಮನೆ ಕಟ್ಟಿಕೊಂಡಿರುವವರು ಕಾವೇರಿ ಸಂಪರ್ಕ ಪಡೆಯಲು ಒಟ್ಟು ₹2900 ಠೇವಣಿ ಪಾವತಿಸ ಬೇಕಾಗುತ್ತದೆ. ಡಿಮ್ಯಾಂಡ್ ನೋಟ್ ಬಂದಾಗ ₹1000 ಹಣ ಪಾವತಿಸಿದರೆ ನೀರಿನ ಸಂಪರ್ಕ ನೀಡಲಾಗುತ್ತದೆ. ಉಳಿದ ಹಣವನ್ನು 12 ತಿಂಗಳ ಕಂತುಗಳ ಮೂಲಕ ಪಾವತಿಸುವ ಸೌಲಭ್ಯ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.