ADVERTISEMENT

ವಿನಯ್– ಸಂತೋಷ್ ಗಲಾಟೆ ಪ್ರಕರಣ ತನಿಖೆ ಸಿಸಿಬಿಗೆ ವರ್ಗ

​ಪ್ರಜಾವಾಣಿ ವಾರ್ತೆ
Published 29 ಜನವರಿ 2019, 20:04 IST
Last Updated 29 ಜನವರಿ 2019, 20:04 IST

ಬೆಂಗಳೂರು: ಬಿಜೆಪಿ ಮುಖಂಡರಾದ ಬಿ.ಎಸ್.ಯಡಿಯೂರಪ್ಪ ಹಾಗೂ ಕೆ.ಎಸ್.ಈಶ್ವರಪ್ಪ ಅವರ ಆಪ್ತರ ಗಲಾಟೆ ಪ್ರಕರಣವನ್ನು ಹೆಚ್ಚಿನ ತನಿಖೆಗಾಗಿ ಸಿಸಿಬಿಗೆ ವರ್ಗಾಯಿಸಲಾಗಿದೆ.

ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದ ಈಶ್ವರಪ್ಪ ಆಪ್ತ ವಿನಯ್, ‘ಮಹಾಲಕ್ಷ್ಮಿ ಲೇಔಟ್ ಪೊಲೀಸರು ಪಾರದರ್ಶಕವಾಗಿ ತನಿಖೆ ನಡೆಸಿಲ್ಲ. ಹೀಗಾಗಿ, ಉನ್ನತಮಟ್ಟದ ತನಿಖೆಗೆ ಆದೇಶಿಸಬೇಕು’ ಎಂದು ಮನವಿ ಮಾಡಿದ್ದರು. ಅದರಂತೆ ಕಮಿಷನರ್ ಸಿಸಿಬಿಗೆ ವಹಿಸಿದ್ದು, ತನಿಖೆ ಹೊಣೆ ಎಸಿಪಿ ಬಾಲರಾಜ್ ಅವರ ಹೆಗಲಿಗೆ ಬಿದ್ದಿದೆ.

ವಿನಯ್ ತಕರಾರು: 2017ರ ಮೇ 11ರಂದು ಇಸ್ಕಾನ್‌ ದೇವಸ್ಥಾನದ ಬಳಿ ವಿನಯ್ ಮೇಲೆ ಹಲ್ಲೆ ನಡೆಸಿದ್ದ ಗ್ಯಾಂಗ್, ಅವರನ್ನು ಅಪಹರಿಸುವುದಕ್ಕೂ ಯತ್ನಿಸಿತ್ತು. ಈ ಸಂಬಂಧ ಬಿಜೆಪಿ ಯುವ ಮೋರ್ಚಾದ ಬೆಂಗಳೂರು ಘಟಕದ ಕಾರ್ಯದರ್ಶಿ ರಾಜೇಂದ್ರ ಅರಸ್, ಎಚ್‌ಎಎಲ್ ಠಾಣೆ ರೌಡಿಶೀಟರ್ ಪ್ರಶಾಂತ್ ಸೇರಿದಂತೆ 11 ಮಂದಿಯನ್ನು ಬಂಧಿಸಿದ್ದ ಮಹಾಲಕ್ಷ್ಮಿ ಲೇಔಟ್ ಪೊಲೀಸರು, ಪ್ರಕರಣದಲ್ಲಿ ಸಂತೋಷ್ ಕೂಡ ಭಾಗಿಯಾಗಿದ್ದ ಸಂಗತಿಯನ್ನೂ ಹೊರಗೆಳೆದಿದ್ದರು. ಅವರನ್ನೇ ಪ್ರಮುಖ ಆರೋಪಿಯನ್ನಾಗಿ ಮಾಡಿ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿಯನ್ನೂ ಸಲ್ಲಿಸಿದ್ದರು.

ADVERTISEMENT

ಆ ಅರೋಪ ಪಟ್ಟಿಗೆ ತಕರಾರು ಎತ್ತಿದ್ದ ವಿನಯ್, ‘ಪ್ರಮುಖ ಆರೋಪಿಯಾಗಿರುವ ಸಂತೋಷ್‌ (ಯಡಿಯೂರಪ್ಪ ಅವರ ಆಪ್ತ) ಹೇಳಿಕೆಯನ್ನು ಚಾರ್ಜ್‌ಶೀಟ್‌ನಲ್ಲಿ ಸೇರಿಸಿಲ್ಲ. ನಾನು ಕೊಟ್ಟ ಸಾಕ್ಷ್ಯಗಳನ್ನೂ ಪರಿಗಣಿಸಿಲ್ಲ. ಕೊಲೆಯತ್ನ ಹಾಗೂ ಅಪಹರಣಕ್ಕೆ ಯತ್ನಿಸಿದ ಕಲಂಗಳಡಿ ಎಫ್‌ಐಆರ್ ದಾಖಲಿಸಿಕೊಂಡಿಲ್ಲ. ಆರೋಪಿಗೆ ಕುಮ್ಮಕ್ಕು ನೀಡಿರುವ ಯಡಿಯೂರಪ್ಪ ಅವರ ಹೇಳಿಕೆಯನ್ನೂ ದಾಖಲಿಸಿಕೊಂಡಿಲ್ಲ. ತನಿಖೆಯಲ್ಲಿ ಪೊಲೀಸರಿಂದ ಇಂಥ ಹಲವು ಲೋಪಗಳಾಗಿವೆ’ ಎಂದು ನ್ಯಾಯಾಧೀಶರ ಮುಂದೆಯೂ ದೂರಿದ್ದರು.

ಆ ತಕರಾರಿನ ನಂತರ ಪೊಲೀಸರು ಎಫ್‌ಐರ್ ಕಲಂಗಳನ್ನು ಬದಲಸಿ ಮತ್ತೆ ತನಿಖೆ ನಡೆಸಿದ್ದರು. ಸಂತೋಷ್‌ ಅವರ ಸ್ವ–ಇಚ್ಛಾ ಹೇಳಿಕೆಯನ್ನೂ ಸೇರಿಸಿ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಿದ್ದರು.

**

ಎಲ್ಲ ನಡೆದಿದ್ದು ಆ ಸಿ.ಡಿಗಾಗಿ

2017ರ ಆರಂಭದಲ್ಲಿ ಯಡಿಯೂರಪ್ಪ ವಿರುದ್ಧ ಸೆಡ್ಡು ಹೊಡೆದಿದ್ದ ಈಶ್ವರಪ್ಪ, ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌’ ಹೆಸರಿನಲ್ಲಿ ಹಿಂದುಳಿದವರನ್ನು ಸಂಘಟಿಸಿ, ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಈ ಸಂಬಂಧ ಬೃಹತ್ ಕಾರ್ಯಕ್ರಮಗಳನ್ನು ನಡೆಸುವ ಯೋಜನೆಯನ್ನೂ ಸಿದ್ಧಪಡಿಸಿದ್ದರು.

ಯಾವ ದಿನ? ಎಲ್ಲಿ ಕಾರ್ಯಕ್ರಮ ನಡೆಸಬೇಕು? ಎಷ್ಟು ಜನರನ್ನು ಸೇರಿಸಬೇಕು? ಅತಿಥಿಗಳನ್ನಾಗಿ ಯಾರನ್ನು ಕರೆಸಬೇಕು ಎಂಬ ವಿವರಗಳನ್ನು ಸಿದ್ಧಪಡಿಸಿದ್ದರು. ಅದನ್ನೇ ಲ್ಯಾಪ್‌ಟಾಪ್ ಹಾಗೂ ಸಿ.ಡಿಯಲ್ಲಿ ಇಟ್ಟಿದ್ದರು. ಆ ಸಿ.ಡಿಗಾಗಿಯೇ ವಿನಯ್ ಅವರನ್ನು ಅಪಹರಿಸಲು ಸಂಚು ನಡೆದಿತ್ತು ಎಂಬುದು ಸ್ಥಳೀಯ ಪೊಲೀಸರ ತನಿಖೆಯಿಂದ ಗೊತ್ತಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.