ADVERTISEMENT

ವಂಚನೆ ಹಣದಲ್ಲೇ ಮನೆ, ಕಾರು ಖರೀದಿ

ಎಂಜಿನಿಯರ್ ಹೆಸರಿನಲ್ಲಿ ಸಾಲ ಪಡೆದಿದ್ದ ಆರೋಪಿಗಳು

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 18:58 IST
Last Updated 22 ಜನವರಿ 2021, 18:58 IST

ಬೆಂಗಳೂರು: ಷೇರು ವ್ಯವಹಾರದ ನೆಪದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್‌ಗಳ ಹೆಸರಿನಲ್ಲಿ ಖಾತೆ ತೆರೆದು ಅಕ್ರಮವಾಗಿ ಸಾಲ ಮಂಜೂರು ಮಾಡಿಸಿಕೊಂಡು ವಂಚಿಸಿದ ಆರೋಪದಡಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಕೊತ್ತನೂರು ಗೋಲ್ಡ್ ಸ್ಮಿತ್ ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿ ಸ್ಟೀಫನ್ ಜಾನ್ಸ್ (35), ಕಲ್ಕೆರೆ ಎನ್‌ಆರ್‌ಐ ಲೇಔಟ್‌ನ ಎಸ್‌.ಆರ್. ರಾಘವೇಂದ್ರ (34) ಹಾಗೂ ವಿದ್ಯಾರಣ್ಯಪುರದ ಮಂಜುನಾಥ್ (43) ಬಂಧಿತರು. ಅವರಿಂದ ಆಡಿ, ಬಿಎಂಡಬ್ಲ್ಯು, ಡಸ್ಟರ್‌ ಕಾರು ಹಾಗೂ ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿರುವ ಸ್ಟೀಫನ್‌ಗೆ ಸೇರಿದ್ದ ₹ 8 ಕೋಟಿ ಮೌಲ್ಯದ ಮನೆಯ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

‘ಷೇರು ವ್ಯವಹಾರದ ಕಂಪನಿ ನಡೆಸುತ್ತಿರುವುದಾಗಿ ಹೇಳಿದ್ದ ಸ್ಟೀಫನ್ ಹಾಗೂ ರಾಘವೇಂದ್ರ, ಹಲವು ಕಂಪನಿಗಳ ಸಾಫ್ಟ್‌ವೇರ್ ಎಂಜಿನಿಯರ್‌ಗಳನ್ನು ಪರಿಚಯ ಮಾಡಿಕೊಂಡಿದ್ದರು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ, ದುಪ್ಪಟ್ಟು ಲಾಭ ಬರುವುದಾಗಿ ಆಮಿಷವೊಡ್ಡುತ್ತಿದ್ದರು.’

ADVERTISEMENT

‘ಆರೋಪಿ ಮಂಜುನಾಥ್‌ ಅವರನ್ನು ಮಧ್ಯವರ್ತಿಯೆಂದು ಎಂಜಿನಿಯರ್‌ ಅವರಿಗೆ ಪರಿಚಯ ಮಾಡಿಕೊಡಲಾಗಿತ್ತು. ಮಧ್ಯವರ್ತಿ ಮೂಲಕವೇ ದಾಖಲೆಗಳ ತಯಾರಿ ಹಾಗೂ ವ್ಯವಹಾರ ನಡೆಸಬೇಕೆಂದು ಆರೋಪಿಗಳು ತಿಳಿಸಿದ್ದರು. ಅದನ್ನು ನಂಬಿದ್ದ ಎಂಜಿನಿಯರ್‌ಗಳು ಹಣ ಹೂಡಿಕೆ ಮಾಡಲು ಒಪ್ಪಿದ್ದರು. ವೈಯಕ್ತಿಕ ದಾಖಲೆಗಳನ್ನೂ ನೀಡಿದ್ದರು.’

‘ಅದೇ ದಾಖಲೆ ಬಳಸಿಕೊಂಡು ಐಸಿಐಸಿಐ, ಕೋಟಕ್ ಮಹೀಂದ್ರ, ಎಚ್‌ಡಿಎಫ್‌ಸಿ, ಯೆಸ್, ಸಿಟಿ ಸೇರಿದಂತೆ ಹಲವು ಬ್ಯಾಂಕ್‌ಗಳನ್ನು ಖಾತೆಗಳನ್ನು ತೆರೆದಿದ್ದರು. ಅದೇ ಖಾತೆಗೆ ಲಕ್ಷಾಂತರ ರೂಪಾಯಿ ಹಣವನ್ನೂ ಜಮೆ ಮಾಡಿಸಿಕೊಂಡಿದ್ದರು. ಎಂಜಿನಿಯರ್‌ಗಳ ಗಮನಕ್ಕೆ ಬಾರದಂತೆ ಅದೇ ಖಾತೆಗಳಿಗೆ ಕೋಟ್ಯಂತರ ರೂಪಾಯಿ ಸಾಲ ಮಂಜೂರು ಮಾಡಿಸಿಕೊಂಡಿದ್ದ ಆರೋಪಿಗಳು, ಹಣವನ್ನು ತಮ್ಮ ಖಾತೆಗೆ ಜಮೆ ಮಾಡಿಸಿಕೊಂಡು ಪರಾರಿಯಾಗಿದ್ದರು’ ಎಂದು ಮೂಲಗಳು ತಿಳಿಸಿವೆ.

‘ವಂಚನೆಗೀಡಾಗಿದ್ದ ಎಂಜಿನಿಯರ್ ಡಿ.ಎಸ್. ಸತೀಶ್ ಎಂಬುವರು ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ವಂಚನೆ ಹಣದಲ್ಲೇ ಆರೋಪಿಗಳು ಐಷಾರಾಮಿ ಕಾರು ಹಾಗೂ ಮನೆ ಖರೀದಿಸಿದ್ದರು ಎಂಬುದು ಗೊತ್ತಾಗಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.