ADVERTISEMENT

ಡ್ರಗ್ಸ್ ಜಾಲದೊಂದಿಗೆ ನಂಟಿನ ಆರೋಪ: ನಟಿ ಸ್ನೇಹಿತನ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 2:52 IST
Last Updated 9 ಅಕ್ಟೋಬರ್ 2020, 2:52 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬೆಂಗಳೂರು: ಡ್ರಗ್ಸ್ ಜಾಲದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ನಟಿಯೊಬ್ಬರ ಸ್ನೇಹಿತ ಎನ್ನಲಾದ ಲೋಕೇಶ್ ಎಂಬುವರನ್ನು ಗುರುವಾರ ವಿಚಾರಣೆಗೆ ಒಳಪಡಿಸಿದರು.

ಪ್ರಕರಣದ ಆರೋಪಿ ಆದಿತ್ಯ ಆಳ್ವ ಸ್ನೇಹಿತನೂ ಆಗಿದ್ದ ಲೋಕೇಶ್ ಕೆಲ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದ ಬಗ್ಗೆ ಸಿಸಿಬಿಗೆ ಮಾಹಿತಿ ಸಿಕ್ಕಿತ್ತು. ಆ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಇತ್ತೀಚೆಗೆ ಲೋಕೇಶ್ ಅವರಿಗೆ ನೋಟಿಸ್ ನೀಡಲಾಗಿತ್ತು.

ಬೆಳಿಗ್ಗೆ 10.30ಕ್ಕೆ ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ವಿಚಾರಣೆಗೆ ಹಾಜರಾದ ಲೋಕೇಶ್, ಪೊಲೀಸರ ಪ್ರಶ್ನೆಗಳಿಗೆ ಲಿಖಿತ ಉತ್ತರ ನೀಡಿದರು. ಹೇಳಿಕೆ ಪಡೆದ ನಂತರ ಪೊಲೀಸರು ಮಧ್ಯಾಹ್ನವೇ ಅವರನ್ನು ಕಚೇರಿಯಿಂದ ವಾಪಸು ಕಳುಹಿಸಿದರು.

ADVERTISEMENT

‘ಲಾಕ್‌ಡೌನ್‌ ಸಂದರ್ಭದಲ್ಲಿ ಹೈಗ್ರೌಂಡ್ಸ್ ಠಾಣೆ ವ್ಯಾಪ್ತಿಯಲ್ಲಿ ಕಾರು ಅಪಘಾತವಾಗಿತ್ತು. ನಟಿ ಹಾಗೂ ಲೋಕೇಶ್ ಗಾಯಗೊಂಡಿದ್ದರು. ಅಪಘಾತದ ಬಗ್ಗೆ ಕೆಲ ಅನುಮಾನಗಳು ಇದ್ದವು. ಆ ಬಗ್ಗೆಯೂ ವಿಚಾರಿಸಲಾಗಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ವಿಚಾರಣೆ ಮುಂದೂಡಿಕೆ:ದಿವಂಗತ ಮುತ್ತಪ್ಪ ರೈ ಪುತ್ರ ರಿಕ್ಕಿ ಅವರನ್ನು ಎರಡು ದಿನ ವಿಚಾರಣೆ ನಡೆಸಿದ್ದ ಪೊಲೀಸರು, ಗುರುವಾರ ಪುನಃ ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಆದರೆ, ಕೆಲ ಕಾರಣಗಳಿಂದ ವಿಚಾರಣೆಯನ್ನು ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.