ADVERTISEMENT

ಕುಂಡದಲ್ಲಿ ಗಾಂಜಾ ಗಿಡ; ಉಪ ಪೆಡ್ಲರ್ ಆಗಿದ್ದ ಶ್ರೀನಿವಾಸ್

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2020, 21:46 IST
Last Updated 21 ಸೆಪ್ಟೆಂಬರ್ 2020, 21:46 IST

ಬೆಂಗಳೂರು: ಡ್ರಗ್ಸ್ ಜಾಲದಲ್ಲಿ ಭಾಗಿಯಾಗಿದ್ದ ಆರೋಪದಡಿ ಬಂಧಿಸಲಾಗಿರುವ ಶ್ರೀನಿವಾಸ್ ಸುಬ್ರಮಣಿಯನ್, ತನ್ನ ಮನೆಯಲ್ಲಿ ಹೂವಿನ ಕುಂಡದಲ್ಲೇ ಗಾಂಜಾ ಗಿಡ ಬೆಳೆದಿದ್ದ ಸಂಗತಿ ಸಿಸಿಬಿ ಪೊಲೀಸರ ದಾಳಿಯಿಂದ ಗೊತ್ತಾಗಿದೆ.

ಶ್ರೀನಿವಾಸ್‌ನನ್ನು ಕಸ್ಟಡಿಗೆ ಪಡೆದು ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಆತ ಹಲವರ ಹೆಸರು ಬಾಯ್ಬಿಟ್ಟಿದ್ದಾನೆ.

ಪ್ರಕರಣದ ಆರೋಪಿ ನಟಿ ರಾಗಿಣಿ ದ್ವಿವೇದಿ ಹಾಗೂ ಬಿ.ಕೆ.ರವಿಶಂಕರ್‌ಗೆ ಆಪ್ತನಾಗಿದ್ದ ಶ್ರೀನಿವಾಸ್, ಡ್ರಗ್ಸ್ ಪಾರ್ಟಿಗಳನ್ನು ಸಂಘಟಿಸಲು ಜಾಗಗಳನ್ನು ಹುಡುಕಿ ಕೊಡುತ್ತಿದ್ದ. ನಂತರ, ಪೆಡ್ಲರ್‌ ಜೊತೆ ಸಂಪರ್ಕವಿಟ್ಟುಕೊಂಡು ಉಪ ಪೆಡ್ಲರ್ ಆಗಿ ಕೆಲಸ ಮಾಡಲಾರಂಭಿಸಿದ್ದ ಎಂದು ಗೊತ್ತಾಗಿದೆ.

ADVERTISEMENT

ಹಾಸನದ ಶ್ರೀನಿವಾಸ್, ಸಹಕಾರ ನಗರದಲ್ಲಿ ಕುಟುಂಬದ ಜೊತೆ ವಾಸವಿದ್ದ. ತನ್ನದೇ ಕಂಪನಿ ತೆರೆದಿದ್ದ ಆತ, ವಿಲ್ಲಾ ಹಾಗೂ ರೆಸಾರ್ಟ್‌ಗಳನ್ನು ಬಾಡಿಗೆ ಪಡೆದು ಹಲವು ಕಂಪನಿಗಳ ಬಳಕೆಗೆ ನೀಡುತ್ತಿದ್ದ. ಅದಕ್ಕೆ ತಕ್ಕಂತೆ ಕಮಿಷನ್ ಪಡೆಯುತ್ತಿದ್ದ. ಡ್ರಗ್ಸ್ ಜಾಲದಲ್ಲಿ ಈಗಾಗಲೇ ಬಂಧಿಸಲಾಗಿರುವ ಆರೋಪಿಗಳ ಪರಿಚಯ ಶ್ರೀನಿವಾಸ್‌ಗೆ ಆಗಿತ್ತು. ಅವಾಗಿನಿಂದಲೇ ಆತ, ಡ್ರಗ್ಸ್ ಪಾರ್ಟಿಗಳನ್ನು ನಡೆಸಲು ವಿಲ್ಲಾ ಹಾಗೂ ರೆಸಾರ್ಟ್ ಕೊಡಿಸಲಾರಂಭಿಸಿದ್ದ. ಅದರಿಂದ ಹೆಚ್ಚಿನ ಕಮಿಷನ್ ಸಿಗಲಾರಂಭಿಸಿತ್ತು. ಆತನೂ ಮಾದಕವ್ಯಸನಿಯಾಗಿ ಬದಲಾಗಿದ್ದ ಎಂದು ಹೇಳಲಾಗಿದೆ.

ಪಾರ್ಟಿಗೆ ಡ್ರಗ್ಸ್ ಪೂರೈಸುತ್ತಿದ್ದ ಪೆಡ್ಲರ್ ಜೊತೆ ಒಡನಾಟ ಬೆಳೆಸಿಕೊಂಡಿದ್ದ ಶ್ರೀನಿವಾಸ್, ತನ್ನದೇ ಜಾಲದ ಮೂಲಕ ಡ್ರಗ್ಸ್ ಮಾರಾಟ ಮಾಡಲಾರಂಭಿಸಿದ್ದ. ಡ್ರಗ್ಸ್‌ಗಳನ್ನು ತನ್ನ ಮನೆಯಲ್ಲೇ ಇಟ್ಟುಕೊಂಡು ಗ್ರಾಹಕರಿಗೆ ನೀಡುತ್ತಿದ್ದ. ಲಾಕ್‌ಡೌನ್ ಸಮಯದಲ್ಲಿ ನಟಿ ರಾಗಿಣಿ ಸೇರಿ ಹಲವರು ಆತನ ಮನೆಗೆ ಹೋಗಿ ಡ್ರಗ್ಸ್ ಸೇವಿಸಿದ್ದರು ಎಂಬುದು ತನಿಖೆ ವೇಳೆ ಗೊತ್ತಾಗಿದೆ.

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ರಾಗಿಣಿ, ಸಂಜನಾ ಗಲ್ರಾನಿ ಹಾಗೂ ಇತರೆ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ 24ಕ್ಕೆ ಮುಂದೂಡಿದೆ.

ಎನ್‌ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ಸೋಮವಾರ ವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಆರೋಪಿಗಳಿಗೆ ಜಾಮೀನು ನೀಡುವಂತೆ ಕೋರಿದರು. ಅದಕ್ಕೆ ಸಿಸಿಬಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದರು.

ರಾಗಿಣಿ ಮೊದಲ ಸ್ನೇಹಿತ ನಾಪತ್ತೆ
ಕಾಟನ್‌ಪೇಟೆ ಠಾಣೆಯಲ್ಲಿ ದಾಖಲಾದ ಪ್ರಕರಣದ ಮೊದಲ ಆರೋಪಿ ಶಿವಪ್ರಕಾಶ್ ಇದುವರೆಗೂ ಸಿಸಿಬಿ ಪೊಲೀಸರಿಗೆ ಕೈಗೆ ಸಿಕ್ಕಿಲ್ಲ. ನಟಿ ರಾಗಿಣಿ ಅವರ ಮೊದಲ ಸ್ನೇಹಿತನಾದ ಆತ, ಪ್ರಕರಣ ದಾಖಲಾದಾಗಿನಿಂದಲೇ ನಾಪತ್ತೆಯಾಗಿದ್ದಾನೆ. ಆತನಿಗಾಗಿ ಹುಡುಕಾಟ ಮುಂದುವರಿದಿದೆ.

’ರಾಗಿಣಿ ಸ್ನೇಹಕ್ಕಾಗಿ ಶಿವಪ್ರಕಾಶ್ ಹಾಗೂ ರವಿಶಂಕರ್ ನಡುವೆ ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ಕಳೆದ ವರ್ಷ ಹೊಡೆದಾಟ ಆಗಿತ್ತು. ಅವಾಗಲೇ ರಾಗಿಣಿ, ಶಿವಪ್ರಕಾಶ್‌ನನ್ನು ದೂರ ಮಾಡಿದ್ದರು. ರವಿಶಂಕರ್ ಜೊತೆ ಹೆಚ್ಚು ಒಡನಾಟವಿಟ್ಟುಕೊಂಡಿದ್ದರು’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.