ADVERTISEMENT

₹10 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ: ಇಬ್ಬರ ಬಂಧನ

ಹೊಸ ವರ್ಷಾಚರಣೆಗೆ ಮಾರಾಟ ಮಾಡಲು ಸಂಗ್ರಹ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2019, 3:04 IST
Last Updated 25 ಡಿಸೆಂಬರ್ 2019, 3:04 IST
ಸಿಸಿಬಿ ಪೊಲೀಸರು ಜಪ್ತಿ ಮಾಡಿರುವ ಡ್ರಗ್ಸ್ ಹಾಗೂ ತೂಕದ ಯಂತ್ರ
ಸಿಸಿಬಿ ಪೊಲೀಸರು ಜಪ್ತಿ ಮಾಡಿರುವ ಡ್ರಗ್ಸ್ ಹಾಗೂ ತೂಕದ ಯಂತ್ರ   

ಬೆಂಗಳೂರು: ಹೊಸ ವರ್ಷಾಚರಣೆ ಪಾರ್ಟಿಗಳಲ್ಲಿ ಮಾರಾಟ ಮಾಡಲು ಸಂಗ್ರಹಿಸಿದ್ದ ₹ 10 ಲಕ್ಷ ಮೌಲ್ಯದ ಮಾದಕ ವಸ್ತುವನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಟ್ಯಾನರಿ ರಸ್ತೆಯ ತುಷಾರ್ ಜೈನ್ (20) ಹಾಗೂ ವಿಜಯನಗರದ ಶಾಕೀಬ್ ಖಾನ್ (21) ಬಂಧಿತರು. ಅವರಿಂದ 80 ಗ್ರಾಂ ಎಂಡಿಎಂಎ, 43 ಎಲ್‌ಎಸ್‌ಡಿ ಮಾತ್ರೆ ಹಾಗೂ ಎಕ್ಸ್‌ಟೆಸ್ಸಿ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ.

‘ಪ್ರತಿಷ್ಠಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ವೇಳೆಯಲ್ಲಿ ಆರೋಪಿಗಳು ಡ್ರಗ್ಸ್ ಮಾರಾಟ ಮಾಡಲಾರಂಭಿಸಿದ್ದರು. ಅದರಿಂದ ಹೆಚ್ಚು ಹಣ ಬರುತ್ತಿದ್ದಂತೆ ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದರು. ಮಾದಕವಸ್ತು ಮಾರಾಟದಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿದ್ದರು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ಡಾರ್ಕ್‌ ವೆಬ್‌ಸೈಟ್‌ಗಳ ಮೂಲಕ ನೆದರ್‌ಲೆಂಡ್‌ನಲ್ಲಿ ಡ್ರಗ್ಸ್ ಖರೀದಿಸುತ್ತಿದ್ದ ಆರೋಪಿಗಳು, ಕೊರಿಯರ್ ಮೂಲಕ ವಿಮಾನದಲ್ಲಿ ನಗರಕ್ಕೆ ತರಿಸಿಕೊಳ್ಳುತ್ತಿದ್ದರು. ಬಿಟ್ ಕಾಯಿನ್ ಮೂಲಕ ಹಣ ಪಾವತಿ ಮಾಡುತ್ತಿದ್ದರು’ ಎಂದರು.

‘ಡಿ.ಜೆ. ಹಳ್ಳಿ ಠಾಣೆ ವ್ಯಾಪ್ತಿಯ ಟ್ಯಾನರಿ ರಸ್ತೆಯ ಗೋದಾಮಿನಲ್ಲಿ ಡ್ರಗ್ಸ್ ಸಂಗ್ರಹಿಸಿಡಲಾಗಿತ್ತು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಗೋದಾಮು ಮೇಲೆ ದಾಳಿ ಮಾಡಲಾಯಿತು. ತೂಕದ ಯಂತ್ರದ ಸಹಿತವಾಗಿ ಡ್ರಗ್ಸ್‌ ಪತ್ತೆಯಾಯಿತು’ ಎಂದರು.

ರೇವ್‌ ಪಾರ್ಟಿ ಶಂಕೆ: ‘ಹೊಸ ವರ್ಷಾಚರಣೆ ನಿಮಿತ್ತ ಇದೇ 31ರಂದು ರಾತ್ರಿ ನಗರದ ಹಲವೆಡೆ ಪಾರ್ಟಿಗಳನ್ನು ಆಯೋಜಿಸಲಾಗಿದೆ. ಆ ಪೈಕಿ ಕೆಲವರು ರೇವ್‌ ಪಾರ್ಟಿ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಅಲ್ಲಿಗೆ ಪೂರೈಕೆ ಮಾಡಲೆಂದೇ ಡ್ರಗ್ಸ್ ಸಂಗ್ರಹಿಸಿಟ್ಟಿದ್ದ ಮಾಹಿತಿ ತನಿಖೆಯಿಂದ ಗೊತ್ತಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.