ADVERTISEMENT

ಗೋಡೆಯೊಳಗೆ ರಹಸ್ಯ ಬಾಕ್ಸ್ !

‘ಅಟ್ಟಿಕಾ ಗೋಲ್ಡ್ ’ ಮಾಲೀಕನ ಮನೆ ಮೇಲೆ ಸಿಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 22:12 IST
Last Updated 3 ಜನವರಿ 2020, 22:12 IST
ಬೊಮ್ಮನಹಳ್ಳಿ ಬಾಬು ಮನೆಯ ಗೋಡೆ ಒಡೆದ ಸಿಸಿಬಿ ಸಿಬ್ಬಂದಿ
ಬೊಮ್ಮನಹಳ್ಳಿ ಬಾಬು ಮನೆಯ ಗೋಡೆ ಒಡೆದ ಸಿಸಿಬಿ ಸಿಬ್ಬಂದಿ   

ಬೆಂಗಳೂರು: ಚಿನ್ನಾಭರಣ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಆರೋಪದಡಿ ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮನಹಳ್ಳಿ ಬಾಬು ಮನೆ ಮೇಲೆ ಸಿಸಿಬಿ ಪೊಲೀಸರು ಶುಕ್ರವಾರ ದಿಢೀರ್ ದಾಳಿ ಮಾಡಿದರು.

ಬಾಣಸವಾಡಿ ಸರ್ವಿಸ್ ರಸ್ತೆಯಲ್ಲಿರುವ ಬಾಬು ಮನೆಗೆ ಹೋಗಿದ್ದ ಸಿಸಿಬಿಯ ಎಸಿಪಿ ನೇತೃತ್ವದ ತಂಡ, ಹಲವು ಗಂಟೆಗಳವರೆಗೆ ಶೋಧ ನಡೆಸಿತು.

‘ಹಳೇ ಮನೆಯನ್ನು ನವೀಕರಣ ಮಾಡಿಸುತ್ತಿದ್ದ ಬಾಬು, ಗೋಡೆಗಳಲ್ಲಿ ರಹಸ್ಯ ಬಾಕ್ಸ್‌ಗಳನ್ನಿಟ್ಟು ಚಿನ್ನಾಭರಣ ಸಂಗ್ರಹಿಸಿಟ್ಟಿದ್ದ ಮಾಹಿತಿ ಸಿಕ್ಕಿತ್ತು. ಅದೇ ಕಾರಣಕ್ಕೆ ದಾಳಿ ಮಾಡಿ ಹುಡುಕಾಟ ನಡೆಸಲಾಯಿತು. ಮನೆಯ ಶೌಚಾಲಯದ ಗೋಡೆಯನ್ನು ಒಡೆದು ನೋಡಿದಾಗ, ರಹಸ್ಯ ಬಾಕ್ಸ್ ಪತ್ತೆಯಾಯಿತು. ಆದರೆ, ಅದರಲ್ಲಿ ಚಿನ್ನಾಭರಣ ಇರಲಿಲ್ಲ’ ಎಂದು ಸಿಸಿಬಿಯ ಅಧಿಕಾರಿಯೊಬ್ಬರು ಹೇಳಿದರು.

ADVERTISEMENT

‘ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿ ಆಗಿರುವ ಬಾಬು, ಸಾರ್ವಜನಿಕರಿಂದ ಚಿನ್ನವನ್ನು ಅಡವಿಟ್ಟುಕೊಂಡು ಸಾಲ ನೀಡಲು ಅಟ್ಟಿಕಾ ಗೋಲ್ಡ್ ಕಂಪನಿ ಆರಂಭಿಸಿದ್ದಾನೆ. ಬೆಂಗಳೂರು ಹಾಗೂ ಹೊರ ಜಿಲ್ಲೆಗಳಲ್ಲಿ ಆತನ ಕಚೇರಿಗಳಿವೆ. ಜೊತೆಗೆ ಅಕ್ರಮವಾಗಿ ಚಿನ್ನಾಭರಣ ವ್ಯವಹಾರ ಮಾಡುತ್ತಿರುವ ಮಾಹಿತಿ ಸಿಕ್ಕಿದೆ’ ಎಂದು ತಿಳಿಸಿದರು.

‘ರಹಸ್ಯ ಬಾಕ್ಸ್‌ಗಳು ಸಿಕ್ಕಿದ್ದರಿಂದ ಅನುಮಾನ ಹೆಚ್ಚಾಗಿದೆ. ಆ ಬಾಕ್ಸ್‌ಗಳನ್ನು ಏಕೆ ಗೋಡೆಯೊಳಗೆ ಅಳವಡಿಸಲಾಗಿದೆ ಎಂಬುದನ್ನು ಪತ್ತೆ ಮಾಡಬೇಕಿದೆ. ಮನೆಯಲ್ಲಿ ಹುಡುಕಾಟವೂ ಮುಂದುವರಿದಿದೆ’ ಎಂದು ಅಧಿಕಾರಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.