ಬೆಂಗಳೂರು: ಪಾರ್ಸೆಲ್‌ಗಳ ಮೂಲಕ ಮಾದಕ ವಸ್ತುಗಳ ಪೂರೈಕೆ ಹಾಗೂ ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೊರಿಯರ್ ಏಜೆನ್ಸಿಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿ, ತಪಾಸಣೆ ಮಾಡಿದರು.
ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಶ್ವಾನದಳದೊಂದಿಗೆ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ವಿವಿಧ ಕೊರಿಯರ್ ಏಜೆನ್ಸಿಗಳಲ್ಲಿ ಪಾರ್ಸೆಲ್‌ಗಳ ತಪಾಸಣೆ ನಡೆಸಿದರು.
ಚಾಮರಾಜಪೇಟೆ, ಕಲಾಸಿ ಪಾಳ್ಯ, ಮೈಸೂರು ರಸ್ತೆ, ಸಂಪಂಗಿರಾಮ ನಗರದಲ್ಲಿರುವ ಬ್ಲೂಡಾರ್ಟ್, ಡಿಎಚ್‌ಎಲ್, ಪ್ರೊಫೆಷನಲ್, ಡಿಟಿಡಿಸಿ, ಜಿ.ಎಂ.ಸಿ, ನ್ಯಾಷನಲ್ ಟ್ರಾವಲ್ಸ್ ಕೊರಿಯರ್ ಏಜೆನ್ಸಿಗಳ ಮೇಲೆ ದಾಳಿ ನಡೆಸಿ, ಪಾರ್ಸೆಲ್‌ಗಳ ತಪಾಸಣೆ ನಡೆಸಲಾಯಿತು. ಈ ವೇಳೆ ಯಾವುದೇ ಮಾದಕ ವಸ್ತುಗಳು ಪತ್ತೆಯಾಗಿಲ್ಲ.
ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್ ಸೇರಿದಂತೆ ಐದು ಸಿಬ್ಬಂದಿ ಪಾಲ್ಗೊಂಡಿದ್ದರು.
‘ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಕಾರಣ ಅಂಚೆ, ಕೊರಿಯರ್ ಮೂಲಕ ಡ್ರಗ್ಸ್ ಸರಬರಾಜು ಮಾಡುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ತಪ್ಪು ವಿಳಾಸ ಕೊಟ್ಟು ಕೊರಿಯರ್‌ಗಳಲ್ಲಿ ಸರಬರಾಜು ಮಾಡುತ್ತಿದ್ದಾರೆ. ಹಾಗಾಗಿ ನಗರದ ಐದು ಕಡೆಗಳಲ್ಲಿ ಕೊರಿಯರ್ ಕಚೇರಿ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿ ತಲುಪಿದ್ದ ಅನೇಕ ಪಾರ್ಸೆಲ್‌ಗಳನ್ನು ಕೆಲ ವರ್ಷಗಳಿಂದ ಯಾರೂ ಸ್ವೀಕರಿಸಿರಲಿಲ್ಲ. ಹಾಗಾಗಿ ಕಳೆದ ಅಕ್ಟೋಬರ್‌ನಲ್ಲಿ ಶ್ವಾನದಳದೊಂದಿಗೆ ಸಿಸಿಬಿ ಪೊಲೀಸರು ತೆರಳಿ ತಪಾಸಣೆ ನಡೆಸಿದ್ದ ವೇಳೆ 606 ಪಾರ್ಸೆಲ್‌ಗಳಲ್ಲಿ ಎಂಡಿಎಂಎ, ಕೊಕೇನ್, ಬ್ರೌನ್ ಶುಗರ್, ಹೈಡ್ರೋಗಾಂಜಾ, ಚರಸ್, ಗಾಂಜಾ ಎಣ್ಣೆ, ಎಂಎಲ್ ನಿಕೋಟಿನ್ ಸೇರಿದಂತೆ ವಿವಿಧ ಮಾದರಿಯ ಮಾದಕ ವಸ್ತುಗಳು ಪತ್ತೆಯಾಗಿದ್ದವು.
ಇಂಗ್ಲೆಂಡ್, ಬ್ಯಾಂಕಾಕ್, ಥಾಯ್ಲೆಂಡ್, ನೆದರ್ಲೆಂಡ್ ಸೇರಿದಂತೆ ವಿವಿಧ ದೇಶಗಳಿಂದ ಮಾದಕ ಪದಾರ್ಥಗಳು ಬಂದಿರುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.