ADVERTISEMENT

ಜ. 15ಕ್ಕೆ ದೆಹಲಿಗೆ ಬರುವಂತೆ ಸಚಿವ ಅರ್ಜುನ್‌ ಮುಂಡಾ ಆಹ್ವಾನ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2024, 16:14 IST
Last Updated 7 ಜನವರಿ 2024, 16:14 IST
ಬೆಂಗಳೂರಿನಲ್ಲಿರುವ ತಮ್ಮ ಮನೆಗೆ ಭಾನುವಾರ ಭೇಟಿನೀಡಿದ್ದ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರನ್ನು ಜೆಡಿಎಸ್‌ ರಾಷ್ಟ್ರಿಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಶಾಲು ಹೊದಿಸಿ, ಹಾರ ಹಾಕಿ ಗೌರವಿಸಿದರು. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಉಪಸ್ಥಿತರಿದ್ದರು
ಬೆಂಗಳೂರಿನಲ್ಲಿರುವ ತಮ್ಮ ಮನೆಗೆ ಭಾನುವಾರ ಭೇಟಿನೀಡಿದ್ದ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ ಅವರನ್ನು ಜೆಡಿಎಸ್‌ ರಾಷ್ಟ್ರಿಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಶಾಲು ಹೊದಿಸಿ, ಹಾರ ಹಾಕಿ ಗೌರವಿಸಿದರು. ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಉಪಸ್ಥಿತರಿದ್ದರು   

ಬೆಂಗಳೂರು: ‘ಜನವರಿ 15 ಮತ್ತು 16ಕ್ಕೆ ದೆಹಲಿಗೆ ಬರುವಂತೆ ಕೇಂದ್ರ ಬುಡಕಟ್ಟು ವ್ಯವಹಾರಗಳ ಖಾತೆ ಸಚಿವ ಅರ್ಜುನ್‌ ಮುಂಡಾ ಆಹ್ವಾನ ನೀಡಿದ್ದಾರೆ. ನಾನು ಆ ದಿನ ದೆಹಲಿಗೆ ಹೋಗುತ್ತೇನೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಅರ್ಜುನ್‌ ಮುಂಡಾ ಅವರು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡರ ಮನೆಗೆ ಭಾನುವಾರ ಭೇಟಿ ನೀಡಿ ಕೆಲ ಕಾಲ ಚರ್ಚೆ ನಡೆಸಿದರು. ಕುಮಾರಸ್ವಾಮಿ ಅವರೂ ಮಾತುಕತೆ ವೇಳೆ ಉಪಸ್ಥಿತರಿದ್ದರು. ಮುಂಡಾ ಅವರನ್ನು ಬೀಳ್ಕೊಟ್ಟ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

‘ನಾನು ಕೇಂದ್ರ ಸಚಿವನಾಗುವ ಬಗ್ಗೆ ಯೋಚಿಸಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸೋಲಿಸಿ ಎಲ್ಲ 28 ಕ್ಷೇತ್ರಗಳಲ್ಲೂ ಗೆಲುವು ಸಾಧಿಸುವುದು ನಮ್ಮ ಗುರಿ. ಮೈತ್ರಿಕೂಟವನ್ನು 28 ಕ್ಷೇತ್ರಗಳಲ್ಲೂ ಗೆಲ್ಲಿಸಬೇಕು ಎಂಬುದು ನನ್ನ ಮುಂದಿರುವ ಏಕೈಕ ಕಾರ್ಯಸೂಚಿ’ ಎಂದು ಕುಮಾರಸ್ವಾಮಿ ತಿಳಿಸಿದರು.

ADVERTISEMENT

‘ಕೇಂದ್ರ ಸಚಿವನಾಗುವ ಕುರಿತು ನನಗೆ ಗೊತ್ತಿಲ್ಲ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಯನ್ನು ಗಮನಿಸಿದ್ದೇನೆ. ನನಗೆ ಅಂತಹ ಆಸೆಯೂ ಇಲ್ಲ. ಫೆಬ್ರುವರಿ ತಿಂಗಳಲ್ಲಿ ಚುನಾವಣಾ ನೀತಿಸಂಹಿತೆ ಜಾರಿಯಾದರೆ ಕೇಂದ್ರ ಮಂತ್ರಿಯಾಗಿ ಏನು ಮಾಡಲಿ’ ಎಂದು ಪ್ರಶ್ನಿಸಿದರು.

ಕ್ಷೇತ್ರ ನಿರ್ಧರಿಸಿಲ್ಲ:

ಜೆಡಿಎಸ್‌ ಮತ್ತು ಬಿಜೆಪಿ ಜತೆಯಾಗಿ ಚುನಾವಣೆ ಎದುರಿಸುವ ನಿರ್ಧಾರವನ್ನು ಮಾತ್ರ ಕೈಗೊಳ್ಳಲಾಗಿದೆ. ಕ್ಷೇತ್ರ ಹಂಚಿಕೆ ಈವರೆಗೂ ಆಗಿಲ್ಲ ಎಂದು ಹೇಳಿದರು.

‘ನಾನು ಸ್ಪರ್ಧಿಸುವ ಕುರಿತು ಇನ್ನೂ ತೀರ್ಮಾನಿಸಿಲ್ಲ. ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಸ್ನೇಹಿತರು ಬಯಸುತ್ತಿದ್ದಾರೆ. ಯಾವ ಕ್ಷೇತ್ರ ಎಂಬುದನ್ನು ಸಮಯ ಬಂದಾಗ ತಿಳಿಸುವೆ’ ಎಂದರು.

‘ಮಂಡ್ಯ ಸಂಸದೆ ಬಿಜೆಪಿಯಲ್ಲಿ ಮುಂದುವರಿಯುವುದಾದರೆ ಮಿತ್ರಪಕ್ಷಗಳ ಪರವಾಗಿ ಅವರನ್ನೂ ಭೇಟಿ ಮಾಡುವೆ. ನಿರ್ದಿಷ್ಟವಾಗಿ ಇದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತೇವೆ ಎಂದು ನಾವು ಎಲ್ಲಿಯೂ ಹೇಳಿಲ್ಲ. ಇಂತಹವರಿಗೆ ತೊಂದರೆ ಕೊಟ್ಟು ಸ್ಪರ್ಧಿಸಬೇಕು ಎಂಬುದೇನೂ ಇಲ್ಲ. ಬಿಜೆಪಿ– ಜೆಡಿಎಸ್‌ ನಾಯಕರು ಕುಳಿತು ಸೌಹಾರ್ದಯುತವಾಗಿ ಚರ್ಚಿಸಿ, ನಿರ್ಧಾರಕ್ಕೆ ಬರುತ್ತೇವೆ’ ಎಂದು ಹೇಳಿದರು.

‘ಜೆಡಿಎಸ್ ಶಾಸಕರಿಗೆ ಸಿಎಂ ಡಿಸಿಎಂ ಆಮಿಷ’
‘ಜೆಡಿಎಸ್‌ ಪಕ್ಷವನ್ನು ಮುಗಿಸುವ ಉದ್ದೇಶದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನಮ್ಮ ಪಕ್ಷದ ಶಾಸಕರಿಗೆ ಆಮಿಷ ಒಡ್ಡುತ್ತಿದ್ದಾರೆ’ ಎಂದು ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು. ‘ದೇವೇಗೌಡರ ಬಗ್ಗೆ ಮುಖ್ಯಮಂತ್ರಿ ಮಾತಾಡಿದ್ದಾರೆ. ಅವರು ಏನೇನು ಮಾಡಿದ್ದಾರೆ ಎಂಬುದು ಗೊತ್ತಿದೆ. ಕ್ಷೇತ್ರದ ಕೆಲಸಕ್ಕೆ ಭೇಟಿಯಾಗುವ ಜೆಡಿಎಸ್‌ ಶಾಸಕರಿಗೆ ಕಾಂಗ್ರೆಸ್‌ ಪಕ್ಷ ಸೇರುವಂತೆ ಆಮಿಷ ಒಡ್ಡುತ್ತಿದ್ದಾರೆ’ ಎಂದರು. ‘ರಾಜ್ಯದಲ್ಲಿ ಈಗ ನಡೆಯುತ್ತಿರುವ ದಬ್ಬಾಳಿಕೆ ಅಕ್ರಮಗಳಿಗೆ ಬೇಸತ್ತು ಜನರೇ ಅವರನ್ನು ಸಮಾಪ್ತಿ ಮಾಡುತ್ತಾರೆ ಎಂದು ದೇವೇಗೌಡರು ಹೇಳಿದ್ದಾರೆ. ನಮ್ಮದು 135 ವರ್ಷಗಳ ಇತಿಹಾಸ ಇರುವ ಪಕ್ಷ ಎಂದು ಶಿವಕುಮಾರ್‌ ಹೇಳಿಕೆ ನೀಡಿದ್ದಾರೆ. ಗಾಂಧೀಜಿ ಇದ್ದಾಗ ಸ್ವಾತಂತ್ರ್ಯ ಹೋರಾಟದ ಇತಿಹಾಸ ಬೇರೆ. ಮನೆ ಆಸ್ತಿ ಮಾರಾಟ ಮಾಡಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಇವರು ಈಸ್ಟ್‌ ಇಂಡಿಯಾ ಕಂಪನಿ ಮಾಡಿದ್ದ ದರೋಡೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.