
ಬೆಂಗಳೂರು: ನಿಯಮಿತ ತಪಾಸಣೆ, ಆರಂಭಿಕ ಹಂತದಲ್ಲಿಯೇ ರೋಗ ಪತ್ತೆ ಸೇರಿ ವಿವಿಧ ಕ್ರಮಗಳಿಂದ ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಪ್ರಕರಣಗಳ ಪ್ರಮಾಣ ಇಳಿಮುಖವಾಗಿದ್ದು, ದೃಢ ಕ್ಯಾನ್ಸರ್ ಪ್ರಕರಣಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಪ್ರಮಾಣ ಶೇ 16ರಷ್ಟಿದೆ ಎಂದು ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ತಿಳಿಸಿದೆ.
ಗರ್ಭಕಂಠ ಕ್ಯಾನ್ಸರ್ ಜಾಗೃತಿ ಮಾಸದ ಪ್ರಯುಕ್ತ ಸಂಸ್ಥೆಯು ಬಿಪಿಎಲ್ ಕುಟುಂಬದ ಸದಸ್ಯರಿಗೆ ಗರ್ಭಕಂಠ ಕ್ಯಾನ್ಸರ್ ಪತ್ತೆಗೆ ಉಚಿತ ತಪಾಸಣೆ ಹಮ್ಮಿಕೊಂಡಿದೆ. ಇದೇ 28ರಂದು ಬೆಳಿಗ್ಗೆ 11 ಗಂಟೆಗೆ ಸಂಸ್ಥೆಯ ಸಭಾಂಗಣದಲ್ಲಿ ಕ್ಯಾನ್ಸರ್ ಗೆದ್ದವರ ದಿನದ ಕಾರ್ಯಕ್ರಮ ಆಯೋಜಿಸಲಾಗಿದೆ.
ಕರ್ನಾಟಕದಲ್ಲಿ ಕಳೆದ ವರ್ಷ 89,165 ಸಕ್ರಿಯ ಕ್ಯಾನ್ಸರ್ ಪ್ರಕರಣಗಳಿರುವ ಬಗ್ಗೆ ಅಂದಾಜಿಸಲಾಗಿದೆ. ಅವುಗಳಲ್ಲಿ 4,476 ಪ್ರಕರಣಗಳು (ಶೇ 9ರಷ್ಟು) ಗರ್ಭಕಂಠ ಕ್ಯಾನ್ಸರ್ ಪ್ರಕರಣಗಳಾಗಿವೆ. ಬೆಂಗಳೂರಿನಲ್ಲಿ 776 ಪ್ರಕರಣಗಳು ವರದಿಯಾಗಿವೆ. ಸಂಸ್ಥೆಯ ನೋಂದಣಿ ಪ್ರಕಾರ, 1980ರಲ್ಲಿ ಮಹಿಳೆಯರಲ್ಲಿ ವರದಿಯಾದ ಕ್ಯಾನ್ಸರ್ ಪ್ರಕರಣಗಳಲ್ಲಿ ಗರ್ಭಕಂಠದ ಕ್ಯಾನ್ಸರ್ ಪ್ರಮಾಣ ಶೇ 40ರಷ್ಟಿತ್ತು. ಇತ್ತೀಚಿನ ವರ್ಷಗಳಲ್ಲಿ ಆ ಪ್ರಮಾಣ ಇಳಿಮುಖ ಮಾಡಿದ್ದು, ಕಳೆದ ವರ್ಷ ಶೇ 16.2ರಷ್ಟು ದೃಢಪಟ್ಟಿದೆ ಎಂದು ಸಂಸ್ಥೆ ತಿಳಿಸಿದೆ.
‘ನಾಲ್ಕು ದಶಕಗಳ ಅವಧಿಯಲ್ಲಿ ಜಾಗೃತಿಯ ಜತೆಗೆ ತಪಾಸಣೆ, ಚಿಕಿತ್ಸೆಗೆ ಆದ್ಯತೆ ನೀಡಲಾಗಿದೆ. ‘ಹ್ಯೂಮನ್ ಪ್ಯಾಪಿಲೋಮ ವೈರಸ್’ನ (ಎಚ್‌ಪಿವಿ) ವಿವಿಧ ತಳಿಗಳು ಗರ್ಭಕಂಠ ಕ್ಯಾನ್ಸರ್‌ಗೆ ಮುಖ್ಯ ಕಾರಣವಾಗಿವೆ. ಸಣ್ಣ ವಯಸ್ಸಿನಲ್ಲಿಯೇ ವಿವಾಹ, ಅಶುಚಿತ್ವ, ಹೆಚ್ಚು ಬಾರಿ ಗರ್ಭಧರಿಸುವುದು, ಗರ್ಭನಿರೋಧಕಗಳ ಬಳಕೆ, ಧೂಮಪಾನ, ಮದ್ಯಪಾನ, ಮಾದಕ ದ್ರವ್ಯಗಳ ವ್ಯಸನ, ಸ್ಟಿರಾಯ್ಡ್ ಔಷಧಗಳ ಬಳಕೆ, ಎಚ್‌ಐವಿಯಂತಹ ಕಾಯಿಲೆ ಈ ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ’ ಎಂದು ಸಂಸ್ಥೆಯ ವೈದ್ಯರು ಹೇಳಿದ್ದಾರೆ.
‘ಸಂಸ್ಥೆಯ ಸಹಯೋಗದಲ್ಲಿ ಜಿಲ್ಲಾ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜಿನಲ್ಲಿ ತಪಾಸಣೆ ಮತ್ತು ಚಿಕಿತ್ಸೆ ಒದಗಿಸಲಾಗುತ್ತಿದೆ. ಈ ಕ್ಯಾನ್ಸರ್ ಪತ್ತೆಗೆ ಸಂಬಂಧಿಸಿದಂತೆ ವಾರ್ಷಿಕ 50ರಿಂದ 100 ತಪಾಸಣಾ ಶಿಬಿರಗಳನ್ನು ಸಂಸ್ಥೆ ನಡೆಸುತ್ತಿದೆ’ ಎಂದು ಮಾಹಿತಿ ಒದಗಿಸಿದ್ದಾರೆ.
ಗರ್ಭಕಂಠ ಕ್ಯಾನ್ಸರ್ ತಡೆಗೆ ಎಚ್‌ಪಿವಿ ಲಸಿಕೆ ಸಹಕಾರಿ. ಹದಿಹರೆಯದ ಹುಡುಗಿಯರು ಇದನ್ನು ಪಡೆಯಬೇಕು. ಮಹಿಳೆಯರು ನಿಯಮಿತ ತಪಾಸಣೆಗೆ ಒಳಗಾಗಬೇಕುಡಾ.ಟಿ.ನವೀನ್ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.