
ಬೆಂಗಳೂರು: ಮಹಿಳೆಯೊಬ್ಬರ ಸರ ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ಜಾಮೀನು ಪಡೆದು ತಲೆಮರೆಸಿಕೊಂಡಿದ್ದ ಆರೋಪಿ ಗುಲಾಬ್ ಖಾನ್ ಅಲಿಯಾಸ್ ಗುಲ್ಲು (50) 26 ವರ್ಷಗಳ ಬಳಿಕ ಜಯನಗರ ಠಾಣೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
‘1998ರ ಜನವರಿ 20ರಂದು ಕೃತ್ಯ ಎಸಗಿದ್ದ ಗುಲಾಬ್ ಖಾನ್, ಜಾಮೀನು ಪಡೆದು ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಇದೀಗ, 26 ವರ್ಷಗಳ ನಂತರ ಈತ ನಮ್ಮ ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
24 ಗ್ರಾಂ ತೂಕದ ಮಾಂಗಲ್ಯ ಸರ: ‘41 ವರ್ಷದ ಮಹಿಳೆಯೊಬ್ಬರು ಜಯನಗರ 5ನೇ ಹಂತದ 11ನೇ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ಆಟೊದಲ್ಲಿ ಹಿಂಬಾಲಿಸಿದ್ದ ಆರೋಪಿ ಗುಲಾಬ್ ಖಾನ್, ಮಹಿಳೆಯ 24 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಸ್ಥಳದಿಂದ ಪರಾರಿಯಾಗಿದ್ದ’ ಎಂದು ತಿಳಿಸಿದರು.
‘ಸರ ಕಳ್ಳತನ ಸಂಬಂಧ ಮಹಿಳೆ ಜಯನಗರ ಠಾಣೆಗೆ ದೂರು ನೀಡಿದ್ದರು. ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಆರೋಪಿ, ನ್ಯಾಯಾಲಯದ ವಿಚಾರಣೆಗೆ ಹಾಜರಾಗುತ್ತಿರಲಿಲ್ಲ’ ಎಂದರು.
ವೆಲ್ಡಿಂಗ್ ಮಳಿಗೆ: ‘ನಗರದ ತೊರೆದು ರಾಮನಗರಕ್ಕೆ ಹೋಗಿದ್ದ ಗುಲಾಬ್ ಖಾನ್, ಅಲ್ಲಿಯೇ ವೆಲ್ಡಿಂಗ್ ಮಳಿಗೆ ತೆರೆದಿದ್ದ. ಸ್ಥಳೀಯರನ್ನು ಪರಿಚಯ ಮಾಡಿಕೊಂಡು ವಾಸಿಸುತ್ತಿದ್ದ. ಈತ ಕಳ್ಳತನ ಪ್ರಕರಣದ ಆರೋಪಿ ಎಂಬುದು ಯಾರಿಗೂ ಗೊತ್ತಿರಲಿಲ್ಲ’ ಎಂದು ಪೊಲೀಸ್ ಅಧಿಕಾರಿ ಹೇಳಿದರು.
‘ಬಂಧನ ಭೀತಿಯಲ್ಲಿದ್ದ ಗುಲಾಬ್ ಖಾನ್, ಯಾವುದೇ ಅಪರಾಧ ಕೃತ್ಯಗಳಲ್ಲಿಯೂ ತೊಡಗಿರಲಿಲ್ಲ. ಅಪರಾಧ ಎಸಗಿದರೆ, ಪೊಲೀಸರು ಪುನಃ ಬಂಧಿಸಬಹುದು. ಹಳೇ ಪ್ರಕರಣದಲ್ಲೂ ಪುನಃ ಸಿಕ್ಕಿಬೀಳಬಹುದೆಂಬ ಭಯ ಆರೋಪಿಗಿತ್ತು. ಗುಲಾಬ್ ಖಾನ್ ರಾಮನಗರದಲ್ಲಿರುವ ಮಾಹಿತಿ ಇತ್ತೀಚೆಗೆ ಲಭ್ಯವಾಗಿತ್ತು. ಆತನ ಚಲನವಲನಗಳ ಮೇಲೆ ನಿಗಾ ವಹಿಸಿ ಇತ್ತೀಚೆಗೆ ಬಂಧಿಸಲಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.