ADVERTISEMENT

ಬಿಡಿಎ: ₹ 15 ಸಾವಿರ ಕೋಟಿ ಸಂಗ್ರಹದ ಗುರಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2021, 20:19 IST
Last Updated 1 ಡಿಸೆಂಬರ್ 2021, 20:19 IST
   

ಬೆಂಗಳೂರು: 'ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ವರ್ಷದೊಳಗೆ ₹ 15 ಸಾವಿರ ಕೋಟಿ ಕ್ರೋಢೀಕರಿಸಲಿದೆ. ನಗರದ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪಾಲುದಾರನಂತೆ ಕಾರ್ಯನಿರ್ವಹಿಸಲಿದೆ’ ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದರು.

ಪ್ರಾಧಿಕಾರದಲ್ಲಿ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವದಲ್ಲಿ ಅವರುಮಂಗಳವಾರ ಮಾತನಾಡಿದರು. ‘ನಗರದಾದ್ಯಂತ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಬಿಡಿಎ ಹೊಂದಿದೆ. ಒತ್ತುವರಿಯಾಗಿರುವ ಈ ಸ್ವತ್ತುಗಳನ್ನು ಸ್ವಾಧೀನಪಡಿಸಿ ನಿವೇಶನಗಳನ್ನಾಗಿ ಅಭಿವೃದ್ಧಿಪಡಿಸಲಿದ್ದೇವೆ. ಅವುಗಳನ್ನು ಹರಾಜು ಹಾಕಿ ಪ್ರಾಧಿಕಾರವನ್ನು ಆರ್ಥಿಕ ಸ್ವಾವಲಂಬಿಯನ್ನಾಗಿ ಮಾಡಲಿದ್ದೇವೆ’ ಎಂದು ಹೇಳಿದರು.

‘ಇತ್ತೀಚಿನ ದಿನಗಳಲ್ಲಿ ಸಿಬ್ಬಂದಿಯಿಂದಾಗಿ ಬಿಡಿಎಗೆ ಕೆಟ್ಟ ಹೆಸರು ಬಂದಿದೆ. ಅದನ್ನು ಮೆಟ್ಟಿ ನಿಂತು ಸಂಸ್ಥೆಗೆ ಮತ್ತೆ ಒಳ್ಳೆಯ ಹೆಸರನ್ನು ತರೋಣ. ಪ್ರಾಧಿಕಾರವನ್ನು ನಾಗರಿಕಸ್ನೇಹಿ ಸಂಸ್ಥೆಯನ್ನಾಗಿ ರೂಪಿಸುವ ಸಂಕಲ್ಪ ತೊಡೋಣ’ ಎಂದರು.

ADVERTISEMENT

‘ಬಿಡಿಎ ಸಿಬ್ಬಂದಿಗಾಗಿ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಸುಸಜ್ಜಿತ ಕಲ್ಯಾಣಮಂಟಪವನ್ನು ನಿರ್ಮಿಸಲಿದ್ದೇವೆ’ ಎಂದು ತಿಳಿಸಿದರು.
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಧ್ವಜಾರೋಹಣ ನೆರವೇರಿಸಿದರು. ರಸಮಂಜರಿ ಕಾರ್ಯಕ್ರಮದಲ್ಲಿ ಬಿಡಿಎ ಆಯುಕ್ತ ಎಂ.ಬಿ.ರಾಜೇಶ್ ಗೌಡ ಕನ್ನಡ ಗೀತೆಗಳನ್ನು ಹಾಡಿದರು. ಬಿಡಿಎ ನೌಕರರ ಸಂಘದ ಅಧ್ಯಕ್ಷ ಆರ್.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಜಿ.ಎಂ.ಶಿವಶಂಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.