ADVERTISEMENT

ಪಿಎಫ್‌ಐ ಅಧ್ಯಕ್ಷ ಸೇರಿ 15 ಮಂದಿ ವಿರುದ್ಧ ಚಾರ್ಜ್‌ಶೀಟ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 19:16 IST
Last Updated 19 ಮಾರ್ಚ್ 2023, 19:16 IST

ಬೆಂಗಳೂರು: ಸಾರ್ವಜನಿಕರ ಶಾಂತಿಗೆ ಭಂಗ ಹಾಗೂ ಕಾನೂನುಬಾಹಿರ ಚಟುವಟಿಕೆಗೆ ಸಂಚು ರೂಪಿಸಿದ್ದ ಆರೋಪದಡಿ ಬಂಧಿಸಲಾಗಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ರಾಜ್ಯ ಘಟಕದ ಅಧ್ಯಕ್ಷ ನಾಸೀರ್ ಪಾಷಾ ಸೇರಿದಂತೆ 15 ಮಂದಿ ವಿರುದ್ಧ ಕೆ.ಜಿ.ಹಳ್ಳಿ ಠಾಣೆ ಪೊಲೀಸರು, ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿದ್ದಾರೆ.

ಕ್ರಿಮಿನಲ್ ಸಂಚು (ಐಪಿಸಿ 120–ಬಿ), ರಾಷ್ಟ್ರದ ವಿರುದ್ಧ ಯುದ್ಧ (ಐಪಿಸಿ 121) ಹಾಗೂ ಎರಡು ಕೋಮುಗಳ ಮಧ್ಯೆ ದ್ವೇಷ ಭಾವನೆ ಹೆಚ್ಚಿಸುವ (ಐಪಿಸಿ 153–ಎ) ಆರೋಪದಡಿ ಪಿಎಫ್‌ಐ ಕಾರ್ಯಕರ್ತರು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡಿದ್ದ ಪೊಲೀಸರು, ಕಚೇರಿ ಹಾಗೂ ಆರೋಪಿಗಳ ಮನೆಗಳ ಮೇಲೆ ದಾಳಿ ಮಾಡಿದ್ದರು. ಬೆಂಗಳೂರು ಪಿಳ್ಳಣ್ಣ ಗಾರ್ಡನ್ ನಿವಾಸಿ ನಾಸಿರ್ ಪಾಷಾ ಸೇರಿ ರಾಜ್ಯದ 15 ಆರೋಪಿಗಳನ್ನು ಬಂಧಿಸಿದ್ದರು. ಇದೇ ಪ್ರಕರಣದಲ್ಲಿ ನಾಲ್ವರು ತಲೆ ಮರೆಸಿಕೊಂಡಿದ್ದಾರೆ.

ADVERTISEMENT

‘ದೇಶದಲ್ಲಿ ಪಿಎಫ್‌ಐ ಸಂಘಟನೆ ನಿಷೇಧಿಸಲಾಗಿದೆ. ಇದರ ಬೆನ್ನಲ್ಲೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿತ್ತು. ಕೃತ್ಯಕ್ಕೆ ಸಂಬಂಧಪಟ್ಟಂತೆ ಪುರಾವೆಗಳನ್ನು ಕಲೆ ಹಾಕಿ ಸುಮಾರು 10,000 ಪುಟಗಳಷ್ಟು ಆರೋಪ ಪಟ್ಟಿ ಸಲ್ಲಿಸಲಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

10 ವರ್ಷಗಳಲ್ಲಿ ₹ 5 ಕೋಟಿ ದೇಣಿಗೆ: ‘ಪಿಎಫ್‌ಐ ಸಂಘಟನೆಯ ಕೆಲವರು, ದಕ್ಷಿಣ ಕನ್ನಡ ಜಿಲ್ಲೆಯ ಮಿಟ್ಟೂರಿನಲ್ಲಿ ‘ಮಿಟ್ಟೂರು ಫ್ರೀಡಂ ಚಾರಿಟಬಲ್ ಟ್ರಸ್ಟ್’ ಸ್ಥಾಪಿಸಿಕೊಂಡಿದ್ದರು. ದೇಶದ ಹಲವೆಡೆಯಿಂದ 10 ವರ್ಷಗಳಲ್ಲಿ ಸುಮಾರು ₹ 5 ಕೋಟಿ ದೇಣಿಗೆ ಬಂದಿತ್ತು’ ಎಂಬ ಸಂಗತಿ ಆರೋಪ ಪಟ್ಟಿಯಲ್ಲಿದೆ.

‘ಟ್ರಸ್ಟ್ ಹಾಗೂ ಇತರೆ ಸಂಘಟನೆಗಳ ಹೆಸರಿನಲ್ಲಿ ಆರೋಪಿಗಳು ಸಭೆ ನಡೆಸುತ್ತಿದ್ದರು. ಕಾನೂನುಬಾಹಿರ ಚಟುವಟಿಕೆ ಬಗ್ಗೆ ಸಂಚು ರೂಪಿಸಿದ್ದರು. ಟ್ರಸ್ಟ್‌ನ ಸ್ವಲ್ಪ ಹಣವನ್ನು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೀಡುತ್ತಿದ್ದರು’ ಎಂದು ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

‘ಮುಸ್ಲಿಂ ಸಮುದಾಯದ ಯುವಕರನ್ನು ಧಾರ್ಮಿಕವಾಗಿ ಪ್ರಚೋದಿಸಿ ಸಂಘಟನೆಗೆ ಸೇರಿಸಿಕೊಳ್ಳುತ್ತಿದ್ದ ಆರೋಪಿಗಳು, ಅವರಿಗೆ ಮಾನಸಿಕ, ದೈಹಿಕ ಹಾಗೂ ಶಸ್ತ್ರಾಸ್ತ್ರ ತರಬೇತಿ ನೀಡುತ್ತಿದ್ದರು. ಇದೇ ಯುವಕರನ್ನು ಬಳಸಿಕೊಂಡು ಗಲಭೆ ಸೃಷ್ಟಿಸುವುದು ಹಾಗೂ ಧರ್ಮಗಳ ನಡುವೆ ವೈಷಮ್ಯ ಬಿತ್ತುವುದು ಆರೋಪಿಗಳ ಉದ್ದೇಶವಾಗಿತ್ತು’ ಎಂಬ ಮಾಹಿತಿಯೂ ಪಟ್ಟಿಯಲ್ಲಿದೆ.

ಆರೋಪಿಗಳ ಪ್ರಚೋದನಕಾರಿ ಭಾಷಣ ಹಾಗೂ ಇತರೆ ಪುರಾವೆಗಳ ವಿಡಿಯೊಗಳನ್ನೂ ಪೊಲೀಸರು ಪಟ್ಟಿಯೊಂದಿಗೆ ಲಗತ್ತಿಸಿರುವುದಾಗಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.