ADVERTISEMENT

₹ 2.30 ಕೋಟಿ ವಂಚನೆ; ರಿಯಲ್‌ ಎಸ್ಟೇಟ್ ಏಜೆಂಟ್ ಬಂಧನ

​ಪ್ರಜಾವಾಣಿ ವಾರ್ತೆ
Published 4 ಜನವರಿ 2021, 19:33 IST
Last Updated 4 ಜನವರಿ 2021, 19:33 IST

ಬೆಂಗಳೂರು: ಅಪರಿಚಿತರ ನಿವೇಶನವನ್ನೇ ತಮ್ಮ ದೊಡ್ಡಪ್ಪನ ನಿವೇಶನವೆಂದು ಹೇಳಿ ಮಾರಾಟದ ಹೆಸರಿನಲ್ಲಿ ₹ 2.30 ಕೋಟಿ ಪಡೆದು ವಂಚಿಸಿರುವ ಆರೋಪದಡಿ ಪುನೀತ್ ಸಿದ್ದೇಗೌಡ ಎಂಬುವರನ್ನು ರಾಜರಾಜೇಶ್ವರಿನಗರ ಪೊಲೀಸರು ಬಂಧಿಸಿದ್ದಾರೆ.

‘ಡಾಲರ್ಸ್‌ ಕಾಲೊನಿ ನಿವಾಸಿ ಪುನೀತ್, ರಿಯಲ್ ಎಸ್ಟೇಟ್ ಉದ್ಯಮಿ. ‘ರಾಯಲ್‌ ಗ್ರೂಪ್’ ಎಂಬ ಏಜೆನ್ಸಿ ನಡೆಸುತ್ತಿದ್ದರು. ಅವರ ವಿರುದ್ಧ ನಿವೃತ್ತ ಸರ್ಕಾರಿ ಅಧಿಕಾರಿಯೂ ಆಗಿರುವ ಶ್ರೀಗಂಧಕಾವಲ್ ನಿವಾಸಿ ದೂರು ನೀಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ರಾಜರಾಜೇಶ್ವರಿನಗರದಲ್ಲಿ ನಿವೇಶನ ಖರೀದಿಗೆ ಮುಂದಾಗಿದ್ದ ದೂರುದಾರರಿಗೆ ಪುನೀತ್ ಪರಿಚಯವಾಗಿತ್ತು. ಐಡಿಯಲ್ ಹೋಮ್ಸ್ ಸೊಸೈಟಿಯಲ್ಲಿದ್ದ ಖಾಲಿ ನಿವೇಶನವೊಂದನ್ನು ತೋರಿಸಿದ್ದ ಆರೋಪಿ, ‘ಇದು ನಮ್ಮ ದೊಡ್ಡಪ್ಪನ ನಿವೇಶನ. ಇದನ್ನು ಮಾರಾಟ ಮಾಡಲು ನನಗೆ ಹೇಳಿದ್ದಾರೆ. ನೀವು ಒಪ್ಪಿದರೆ, ನಿಮಗೆ ನಿವೇಶನ ಕೊಡಿಸುತ್ತೇನೆ’ ಎಂದಿದ್ದರು. ಅದನ್ನು ನಂಬಿದ್ದ ದೂರುದಾರ, ಹಂತ ಹಂತವಾಗಿ ₹ 2.30 ಕೋಟಿ ನೀಡಿದ್ದರು. ನಿವೇಶನ ನೋಂದಣಿ ಸಮಯದಲ್ಲಿ ಆರೋಪಿ ಕೃತ್ಯ ಬಯಲಾಗಿತ್ತು. ಹಣ ವಾಪಸು ಕೇಳಿದ್ದಕ್ಕೆ, ಆರೋಪಿ ಜೀವ ಬೆದರಿಕೆ ಹಾಕಿದ್ದರು’ ಎಂದೂ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.