ADVERTISEMENT

ಕಾಲುವೆಯಲ್ಲಿ ಬೆಂಕಿ: ರಾಸಾಯನಿಕ ಸುರಿದಿದ್ದ ಗುಜರಿ ವ್ಯಾಪಾರಿ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2020, 12:49 IST
Last Updated 13 ಜೂನ್ 2020, 12:49 IST

ಬೆಂಗಳೂರು: ರಾಜಾಜಿನಗರದ 5ನೇ ಮುಖ್ಯರಸ್ತೆಯ 9ನೇ ಅಡ್ಡರಸ್ತೆ ಕಾಲುವೆಯಲ್ಲಿ ಶನಿವಾರ ಏಕಾಏಕಿ ಬೆಂಕಿ ಹೊತ್ತಿ ಉರಿದಿದ್ದರಿಂದಾಗಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ಕಾಲುವೆಯಿಂದ ಹೊಗೆ ಬರುತ್ತಿದ್ದರಿಂದ ಆತಂಕಗೊಂಡ ಸ್ಥಳೀಯರು ಮನೆಯಿಂದ ಹೊರಗೆ ಓಡಿ ಬಂದಿದ್ದರು. ಕಾಲುವೆಯಿಂದ ದೂರ ಹೋಗಿ ನಿಂತುಕೊಂಡು ಕೂಗಾಡುತ್ತಿದ್ದರು.

ಪೊಲೀಸರು ಹಾಗೂ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ, ಮೂರು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಬಳಿಕವೇ ಆತಂಕ ದೂರವಾಯಿತು.

ADVERTISEMENT

‘ಸ್ಥಳೀಯ ಗುಜರಿ ವ್ಯಾಪಾರಿ ಸ್ವಾಮಿ (48) ಎಂಬುವರು ಕಾಲುವೆಯಲ್ಲಿ ರಾಸಾಯನಿಕ ಸುರಿದಿದ್ದರು. ಅದು ಕಾಲುವೆ ಪೂರ್ತಿ ಹರಡಿಕೊಂಡು ಬೆಂಕಿ ಹೊತ್ತಿಕೊಂಡಿತ್ತು. ರಸ್ತೆ ಪಕ್ಕದ ಕಸದ ರಾಶಿಗೂ ಬೆಂಕಿ ತಗುಲಿತ್ತು. ಘಟನೆ ಸಂಬಂಧ ಸ್ವಾಮಿ ಅವರನ್ನು ಈಗಾಗಲೇ ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ರಾಸಾಯನಿಕ ಕಂಪನಿಯೊಂದರಿಂದ ಕ್ಯಾನ್‌ಗಳನ್ನು ಪಡೆದಿದ್ದ ಸ್ವಾಮಿ, ಅವುಗಳನ್ನು ಮರಬಳಕೆಗಾಗಿ ಮಾರಾಟ ಮಾಡಲು ಮುಂದಾಗಿದ್ದರು. ಅದೇ ಕಾರಣಕ್ಕೆ ಕ್ಯಾನ್‌ನಲ್ಲಿದ್ದ ರಾಸಾಯನಿಕರನ್ನು ಕಾಲುವೆಗೆ ಸುರಿದಿದ್ದರು. ಈ ಸಂಬಂಧ ಅವರು ಹೇಳಿಕೆ ನೀಡಿದ್ದಾರೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.