ADVERTISEMENT

ಚಿಕ್ಕಪೇಟೆ: ವ್ಯಾಪಾರ ನಡೆಸಲು ಬಿಬಿಎಂಪಿ ಷರತ್ತುಬದ್ಧ ಅನುಮತಿ

​ಪ್ರಜಾವಾಣಿ ವಾರ್ತೆ
Published 27 ಜುಲೈ 2020, 21:37 IST
Last Updated 27 ಜುಲೈ 2020, 21:37 IST

ಬೆಂಗಳೂರು: ವ್ಯಾಪಾರಿಗಳ ಸಂಘಟನೆಗಳು ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಚಿಕ್ಕಪೇಟೆ ಪ್ರದೇಶದ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ನಡೆಸಲು ಬೃಹತ್ ಬೆಂಗಳೂರು ಮಹಾನಗರಪಾಲಿಕೆ (ಬಿಬಿಎಂಪಿ) ಷರತ್ತುಬದ್ಧ ಅನುಮತಿ ನೀಡಿದೆ.

ಕೊರೊನಾ ಸೋಂಕು ವ್ಯಾಪಿಸಿದ ಕಾರಣಕ್ಕೆ ಚಿಕ್ಕಪೇಟೆಯನ್ನು ಪಾಲಿಕೆ ಜೂನ್ 24ರಂದು ಸೀಲ್‍ಡೌನ್ ಮಾಡಿತ್ತು. ಇಲ್ಲಿನ ವ್ಯಾಪಾರಕ್ಕೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು ವ್ಯಾಪಾರಿಗಳು ಪಾಲಿಕೆ ಆಯುಕ್ತರ ಬಳಿ ಸಂಕಷ್ಟ ಹೇಳಿಕೊಂಡಿದ್ದರು.

ಚಿಕ್ಕಪೇಟೆಯಲ್ಲಿ ಹೆಚ್ಚಿನ ಜನ ಸೇರುವ ಕಾರಣಕ್ಕೆ ಇಲ್ಲಿನ ಬೀದಿಗಳ ಒಂದು ಬದಿಯ ಮಳಿಗೆಗಳನ್ನು ಒಂದು ದಿನ ತೆರೆಯುವುದು, ಇನ್ನೊಂದು ಬದಿಯ ಮಳಿಗೆಗಳನ್ನು ಮರುದಿನ ತೆರೆಯುವಂತೆ ಪಾಲಿಕೆ ಸೂಚಿಸಿದೆ.

ADVERTISEMENT

ಈ ನಿಯಮ ಟೌನ್ ಹಾಲ್ ವೃತ್ತದಿಂದ ಜೆ.ಸಿ.ರಸ್ತೆ, ಕಲಾಸಿಪಾಳ್ಯ ಮುಖ್ಯರಸ್ತೆ, ಕೆ.ಆರ್.ಮಾರುಕಟ್ಟೆ, ಟಿಪ್ಪು ಸುಲ್ತಾನ್ ಅರಮನೆ ರಸ್ತೆ, ಭಾಷ್ಯಂ ರಸ್ತೆ, ಕಿಲಾರಿ ರಸ್ತೆ, ಆಂಜನೇಯ ದೇವಾಲಯ ರಸ್ತೆ ಹಾಗೂ ಎಸ್‍ಜೆಪಿ ರಸ್ತೆಗಳಿಗೆ ಅನ್ವಯಿಸಲಿದೆ.

‘ವ್ಯಾಪಾರಿಗಳ ಮನವಿ ಮೇರೆಗೆ ವ್ಯಾಪಾರಕ್ಕೆ ಅನುಮತಿ ನೀಡಲಾಗಿದೆ. ಪ್ರತಿ ಮಳಿಗೆಯಲ್ಲಿ ಶೇ 50ರಷ್ಟು ಸಿಬ್ಬಂದಿ ಇರಬೇಕು. ಸ್ಯಾನಿಟೈಸರ್ ಬಳಕೆ, ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಕಡ್ಡಾಯ’ ಎಂದು ಪಾಲಿಕೆ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

‘ಕೆ.ಆರ್.ಮಾರುಕಟ್ಟೆ ಹಾಗೂ ಕಲಾಸಿಪಾಳ್ಯ ಮಾರುಕಟ್ಟೆಗಳು, ಈ ಭಾಗದ ಮದ್ಯದ ಅಂಗಡಿಗಳು, ಧಾರ್ಮಿಕ ಸ್ಥಳಗಳು, ಹೂವಿನ ಮಾರುಕಟ್ಟೆ ಹಾಗೂ ಮಳಿಗೆಗಳೂ ಮುಚ್ಚಿರಲಿವೆ. ಈ ಪ್ರದೇಶದಲ್ಲಿ ನಿತ್ಯ ಸೋಂಕುನಿವಾರಕ ಸಿಂಪಡಿಸಲಾಗುವುದು. ನಿಯಮ ಉಲ್ಲಂಘಿಸಿದ ವ್ಯಾಪಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.